ಆನೇಕಲ್: ಮದ್ಯದಂಗಡಿಗಳನ್ನು ಮುಚ್ಚಿಸಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳನ್ನು ರಕ್ಷಿಸಿ ಎಂದು ನೊಂದ ಮಹಿಳೆಯರು ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ರೂಪಾಯಿ ಮನಿ ಆರ್ಡರ್ ಮಾಡುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಆನೇಕಲ್ ಪಟ್ಟಣದ ತಾಲೂಕು ಅಂಚೆ ಕಚೇರಿಯಿಂದ ಮಹಿಳೆಯರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಮನಿ ಆರ್ಡರ್ ಮಾಡಿದ್ದಾರೆ.
ಕೊರೊನಾ ಲಾಕ್ಡೌನ್ನಿಂದಾಗಿ ವಿಶ್ವವೇ ತತ್ತರಿಸಿದೆ. ಒಪ್ಪೊತ್ತಿನ ಊಟಕ್ಕೂ ಸಂಕಷ್ಟ ಅನುಭವಿಸುತ್ತಿರುವ ಈ ಪರಿಸ್ಥಿತಿಯಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದು ದುರಂತ ಎಂದು ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ಮದ್ಯದಂಗಡಿಗಳ ಮುಂದೆ ಪುರುಷರು, ರೇಷನ್ ಅಂಗಡಿಗಳ ಮುಂಭಾಗ ಮಹಿಳೆಯರು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳ ಹಾಗೂ ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅಪಘಾತ, ಕಳ್ಳತನ, ದರೋಡೆ, ಕೌಟುಂಬಿಕ ದೌರ್ಜನ್ಯಗಳು ಹೆಚ್ಚುತಿವೆ. ವ್ಯಸನಿಗಳು ಹಣವಿಲ್ಲದೆ ಮದ್ಯ ಖರೀದಿಸಲು ಮನೆಯಲ್ಲಿನ ರೇಷನ್ ಹಾಗೂ ವಸ್ತುಗಳನ್ನು ಸಹ ಮಾರುತ್ತಿದ್ದಾರೆ. ಜನ ಸಂಕಷ್ಟದಲ್ಲಿದ್ದರೆ, ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಮದ್ಯದಂಗಡಿಗೆ ಅನುಮತಿ ಕೊಟ್ಟಿದ್ದು ಶೋಚನೀಯ. ಕೂಡಲೇ ಮದ್ಯ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಿ, ಹಸಿದ ಹೊಟ್ಟೆಗೆ ಅನ್ನ ಹಾಕಿ ಎಂದು ಮನವಿ ಮಾಡಿದರು.