ಹೊಸಕೋಟೆ: ಪತಿಯೇ ತನ್ನ ಬಾಣಂತಿ ಪತ್ನಿಯನ್ನು ಹತ್ಯೆಗೈದ ಆರೋಪ ಹೊಸಕೋಟೆ ತಾಲೂಕಿನ ಕೊಳತೂರು ಗ್ರಾಮದಲ್ಲಿ ನಿನ್ನೆ (ಸೋಮವಾರ) ಕೇಳಿಬಂದಿದೆ. ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರತಿಭಾ (23) ಕೊಲೆಯಾದವರು. ಆರೋಪಿ ಪತಿ ಕಿಶೋರ್ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದಾರೆ.
''ಪತ್ನಿಯ ಬಗ್ಗೆ ಆತ ಅನುಮಾನ ಪಡುತ್ತಿದ್ದನು. ಹೆರಿಗಾಗಿ ಆಕೆ ತವರು ಮನೆಗೆ ಬಂದಿದ್ದಳು. 11 ದಿನದ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದಳು. ಹೆಂಡತಿ, ಮಗುವನ್ನು ನೋಡಲು ಬಂದಿದ್ದಾಗ ಆತ ಪತ್ನಿಯನ್ನು ಕೊಂದು ಪರಾರಿಯಾಗಿದ್ದಾನೆ'' ಎಂದು ಕುಟುಂಬಸ್ಥರು ದೂರಿದ್ದಾರೆ.
ಚಾಮರಾಜನಗರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ಕಿಶೋರ್, ಒಂದು ವರ್ಷದ ಹಿಂದೆ ಪ್ರತಿಭಾ ಅವರನ್ನು ಮದುವೆಯಾಗಿದ್ದರು. ಇತ್ತೀಚೆಗೆ ಬಾಣಂತನಕ್ಕಾಗಿ ತವರು ಮನೆಗೆ ಬಂದಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಪ್ರತಿಭಾ ಮಗುವಿಗೆ ಜನ್ಮ ನೀಡಿದ್ದರು. ನಿನ್ನೆ ಎಂದಿನಂತೆ ಮನೆಗೆ ಬಂದಿದ್ದ ಕಿಶೋರ್, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಆತ್ಮಹತ್ಯೆಯಂತೆ ಬಿಂಬಿಸುವ ಯತ್ನ ಮಾಡಿದ್ದಾನೆ. ಅಷ್ಟರಲ್ಲಿ ಮನೆಯವರು ಬಂದಿದ್ದು ಸ್ಥಳದಿಂದ ಪರಾರಿ ಆಗಿದ್ದಾನೆ ಎಂದು ಮೃತಳ ಮನೆಯವರು ಆರೋಪಿಸಿದ್ದಾರೆ.
ಹೆಂಡತಿಯ ಮೇಲೆ ಸದಾ ಅನುಮಾನ ಪಡುತ್ತಿದ್ದ. ಗಂಡನ ಮನೆಯವರ ಕಡೆಯವರನ್ನು ನೀನು ಸರಿಯಾಗಿ ನೋಡ್ತಿಲ್ಲ ಅಂತ ಗಲಾಟೆ ಮಾಡ್ತಿದ್ದ. ಇದೇ ವಿಚಾರಕ್ಕೆ ಹಲವು ಬಾರಿ ಗಂಡ, ಹೆಂಡತಿ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ. ಇನ್ನು ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರೋಪಿಯ ಬಂಧನದ ಬಳಿಕವಷ್ಟೇ ನಿಜಾಂಶ ಹೊರಬರಲಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇತ್ತೀಚಿನ ಪ್ರಕರಣ-ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಹುಬ್ಬಳ್ಳಿ ನಗರದ ಆನಂದ ನಗರದ ಬ್ಯಾಹಟ್ಟಿ ಪ್ಲಾಟ್ನಲ್ಲಿ ಇತ್ತೀಚೆಗೆ ನಡೆದಿತ್ತು. ಭೀಮಪ್ಪ ಮುತ್ತಲಗಿ ಎಂಬಾತ ಕೊಲೆ ಆರೋಪಿ. ಕೊಡಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದ ಈತ ಭಯಗೊಂಡು ತಾನೇ ಪೊಲೀಸರಿಗೆ ಶರಣಾಗಿದ್ದ. ಘಟನಾ ಸ್ಥಳಕ್ಕೆ ದಕ್ಷಿಣ ವಿಭಾಗ ಎಸಿಪಿ ಆರ್.ಕೆ.ಪಾಟೀಲ್, ಹಳೇ ಹುಬ್ಬಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರ ಮತ್ತು ಪಿಎಸ್ಐ ಬನ್ನಿಕೊಪ್ಪ ಭೇಟಿ ನೀಡಿ ಪರಿಶೀಲಿಸಿದ್ದರು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Husband kills wife: ಶೀಲ ಶಂಕಿಸಿ ಪತ್ನಿಯ ಹತ್ಯೆ.. ಪೊಲೀಸ್ ಠಾಣೆಗೆ ಶರಣಾದ ಪತಿ