ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಾಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ ನಿನ್ನೆ ತಡರಾತ್ರಿ 35 ವರ್ಷದ ಹನುಮಯ್ಯ ಎಂಬಾತನನ್ನು ಆತನ ಮನೆಯಲ್ಲಿ ಕೊಲೆ ಮಾಡಲಾಗಿದೆ. ಹನುಮಯ್ಯನ ಹೆಂಡತಿ ಭಾಗ್ಯಲತಾ ಗಂಡನ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಬೆಳಗ್ಗೆ ಪಕ್ಕದ ಮನೆಯ ಹುಡುಗಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹನುಮಯ್ಯನ ಮೃತದೇಹ ಕಂಡು ಗ್ರಾಮಸ್ಥರಿಗೆ ತಿಳಿಸಿದ್ದಾಳೆ.
ಯಲಹಂಕ ಅಟ್ಟೂರಿನ ಭಾಗ್ಯಲತಾಳನ್ನು ಹನುಮಯ್ಯ 14 ವರ್ಷಗಳ ಹಿಂದೆ ಮದುವೆಯಾಗಿದ್ದ. ಹನುಮಯ್ಯ ಕುಡಿದು ಗಲಾಟೆ ಮಾಡುತ್ತಿದ್ದ. ಇದರಿಂದ ಮುನಿಸಿಕೊಂಡು ತವರು ಮನೆಗೆ ಹೊಗಿದ್ದ ಭಾಗ್ಯಲತಾ ಇತ್ತಿಚಿಗೆ ಗಂಡನ ಮನೆಗೆ ಮರಳಿದ್ದಳು. ಭಾಗ್ಯಲತಾ ಗಂಡನಿಗೆ ತಿಳಿಯದಂತೆ ಮೊಬೈಲ್ ಬಳಕೆ ಮಾಡುತ್ತಿದ್ದರಿಂದ ಅನೈತಿಕ ಸಂಬಂಧ ಇತ್ತೆಂದು ಶಂಕಿಸಲಾಗಿದೆ. ನಿನ್ನೆ ರಾತ್ರಿ ಪಕ್ಕದ ಮನೆಯಲ್ಲಿ ಊಟ ಮಾಡಿ ರಾತ್ರಿ ಮನೆಗೆ ಹನುಮಯ್ಯ ಮರಳಿದ್ದ. ರಾತ್ರಿ ಒಂದು ಗಂಟೆಯ ವೇಳೆಗೆ ಗಂಡನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಪೊಲೀಸರು ಮೊಬೈಲನ್ನು ವಶಕ್ಕೆ ತೆಗೆದುಕೊಂಡಿದ್ದು, ಭಾಗ್ಯಲತಾಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಮನೆ ಕಟ್ಟಲು ತಂದಿದ್ದ ಸಾಲದ ಬಾಧೆ : ಪತಿ-ಪತ್ನಿ ವಿಷ ಸೇವಿಸಿ ಆತ್ಮಹತ್ಯೆ