ಹೊಸಕೋಟೆ(ಬೆಂಗಳೂರು): ಗಂಡನ ಅಕ್ರಮ ಸಂಬಂಧ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಮಗು ಜೊತೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರ ಗ್ರಾಮದ ಶ್ವೇತ (24) ಮತ್ತು ಒಂದೂವರೆ ವರ್ಷದ ಯಕ್ಷಿತ್ ಮೃತ ದುರ್ದೈವಿಗಳು.
3 ವರ್ಷದ ಹಿಂದೆ ಗ್ರಾಮದ ರಾಕೇಶ್ ಎಂಬುವವನನ್ನು ಶ್ವೇತ ಮದುವೆಯಾಗಿದ್ದರು. ಮದುವೆ ನಂತರ ಗ್ರಾಮದ ಮಹಿಳೆ ಜೊತೆ ಗಂಡ ರಾಕೇಶ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಇದೇ ವಿಚಾರವಾಗಿ ಹಲವು ಬಾರಿ ಗಲಾಟೆ ಮಾಡಿ ಕುಟುಂಬಸ್ಥರು ಸೇರಿ ರಾಜಿ ಪಂಚಾಯತಿ ಮಾಡಿದ್ದರು. ಆದರೂ ಅಕ್ರಮ ಸಂಬಂಧದ ಸಹವಾಸ ರಾಕೇಶ್ ಬಿಟ್ಟಿರಲಿಲ್ಲ.
ಗಂಡ ಮತ್ತು ಅವರ ಮನೆಯವರು ಆಗಾಗ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದರು. ಇದರಿಂದ ಮನನೊಂದ ಶ್ವೇತ ತನ್ನ ಪುಟ್ಟ ಮಗುವಿನ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷ ಲಕ್ಷ ಹಣ ಆಭರಣಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದೆವು. ಆದರೂ ಮತ್ತೆ ಮತ್ತೆ ಹಣ ತರುವಂತೆ ಕಿರುಕುಳ ನೀಡುತ್ತಿದ್ದರು. ಇದಕ್ಕೆ ಬೇಸತ್ತು ಶ್ವೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರಿಕ್ಷೆಗಾಗಿ ಎಂವಿಜೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ