ದೇವನಹಳ್ಳಿ (ಬೆಂಗಳೂರು ಗ್ರಾ): ಚುನಾವಣೆ ಸಮೀಪಿಸುತ್ತಿದ್ದಂತೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಜಗಳ ಶುರುವಾಗಿದೆ. ಹಾಲಿ ಶಾಸಕರು ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಆಹ್ವಾನಿಸಿಲ್ಲ, ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯ ಮಾಜಿ ಶಾಸಕ, ಹಾಲಿ ಶಾಸಕರ ಮೇಲೆ ಭ್ರಷ್ಟಚಾರ ಆರೋಪ ಮಾಡಿದ್ದಾರೆ.
ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ, ಈ ಬಗ್ಗೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡೋಕೆ ಬರುವಂತೆ ಆಹ್ವಾನಿಸಿದ್ದಾರೆ. ನ.11 ರಂದು ಪ್ರಧಾನಿ ನರೇಂದ್ರ ಮೋದಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ, ಉದ್ಘಾಟನೆಯ ಮರುದಿನ ಕಪ್ಪುಪಟ್ಟಿ ಧರಿಸಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದರು.
ಇದರಿಂದ ಕೆರಳಿದ ಮಾಜಿ ಶಾಸಕ, ಬಿಜೆಪಿಯ ಸಂಭವನೀಯ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ, ಹಾಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮೇಲೆ ಹರಿಹಾಯ್ದಿದ್ದಾರೆ. ಒಕ್ಕಲಿಗರ ವಿಶ್ವಾಸಗಳಿಸಲು ಸಾಧ್ಯವಾಗದೇ ಐತಿಹಾಸಿಕ ಕಾರ್ಯಕ್ರಮಕ್ಕೆ ಬಾರದೇ ಶಿಷ್ಟಾಚಾರ ಉಲ್ಲಂಘನೆಯ ಆರೋಪ ಮಾಡ್ತಿದ್ದಾರೆ. ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನೂ ಇಲ್ಲ. ಬರಿ ಚುನಾವಣೆ ಸಮೀಪವಾಗ್ತಿದ್ದಂತೆ ಆರೋಪ ಮಾಡಿಕೊಂಡು ಭಾರಿ ಭ್ರಷ್ಟಾಚಾರ ಮಾಡೋದ್ರಲ್ಲಿ ನಿರತರಾಗಿದ್ದಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ: 'ಕೆಂಪೇಗೌಡರ ಪ್ರತಿಮೆ ವೀಕ್ಷಣೆಗೆ ಯಾವುದೇ ಶುಲ್ಕ ಇಲ್ಲ, ಶೀಘ್ರದಲ್ಲೇ ಮತ್ತಷ್ಟು ಸೌಲಭ್ಯ'
ಈ ಆರೋಪದಿಂದ ಕೆರಳಿರುವ ಹಾಲಿ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾಧ್ಯಮಗೋಷ್ಠಿ ನಡೆಸಿ, ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ. ನಾನೇದರೂ ನಮ್ಮ ವಂಶದಲ್ಲಿ ಭ್ರಷ್ಟಾಚಾರ ಮಾಡಿದ್ರೆ, ಆಣೆ ಪ್ರಮಾಣ ಮಾಡೋಕೆ ರೆಡಿ ಎಂದಿದ್ದಾರೆ. ಪ್ರಧಾನಿ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಪಿಡಿಒಗಳ ಬಳಿ 25 ಸಾವಿರ ರೂ ವಸೂಲಿ ಮಾಡಿರುವ ಬಗ್ಗೆ ಹಾಲಿ ಶಾಸಕರು ಬಿಜೆಪಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.