ದೊಡ್ಡಬಳ್ಳಾಪುರ: ಕೊರೊನಾ ನಡುವೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ನಗರದ ವಿದ್ಯಾನಿಧಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 8 ಹಾಗೂ 9ನೇ ಸ್ಥಾನ ಪಡೆದಿದ್ದಾರೆ.
ಅಭಿಷೇಕ್ ಆರ್. ರಾಜ್ಯಕ್ಕೆ 8ನೇ ಸ್ಥಾನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಕನ್ನಡದಲ್ಲಿ 98, ಇಂಗ್ಲೀಷ್ 92, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 100, ಗಣಿತ 100, ಜೀವಶಾಸ್ತ್ರದಲ್ಲಿ 99 ಅಂಕಗಳನ್ನು ಪಡೆದು ಒಟ್ಟು 589 ಅಂಕಗಳೊಂದಿಗೆ ಶೇಕಡಾ 98.16% ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಅಭಿಷೇಕ್, ನಾನು ಪ್ರತಿದಿನ 5 ರಿಂದ 6 ತಾಸು ವ್ಯಾಸಂಗ ಮಾಡುತ್ತಿದ್ದೆ. ಎಷ್ಟು ಓದಿದೆ ಅನ್ನುವುದಕ್ಕಿಂತ ನಿರಂತರವಾಗಿ ಓದಬೇಕು. ನನ್ನ ತಾಯಿ ಚಿಕ್ಕ ವಯಸ್ಸಿನಿಂದಲೂ ಪ್ರಶ್ನೆ ಪತ್ರಿಕೆಯೊಂದಿಗೆ ಓದಿಸುತ್ತಿದ್ದರು. ಉತ್ತಮ ಅಂಕ ಗಳಿಸಲು ತಾಯಿ ಹಾಕಿದ ಅಡಿಪಾಯ ನೆರವಾಗಿದೆ ಎಂದರು.
ಇದೇ ಕಾಲೇಜಿನ ಮಂಜುಶ್ರೀ ಬಿ.ಎ. ರಾಜ್ಯಕ್ಕೆ 9ನೇ ಸ್ಥಾನ ಹಾಗೂ ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದಾರೆ. ಇವರು ಕನ್ನಡದಲ್ಲಿ 98, ಇಂಗ್ಲೀಷ್ 96, ಭೌತಶಾಸ್ತ್ರ 97, ರಸಾಯನ ಶಾಸ್ತ್ರ 98, ಗಣಿತ 100, ಜೀವಶಾಸ್ತ್ರದಲ್ಲಿ 99 ಅಂಕಗಳನ್ನು ಪಡೆದು ಒಟ್ಟು 588 ಅಂಕಗಳೊಂದಿಗೆ ಶೇಕಡಾ 98.00 ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಮಂಜುಶ್ರೀ, ನಾನು ತಂದೆಯಂತೆ ಇಂಜಿನಿಯರ್ ಆಗುತ್ತೇನೆ. ಕಾಲೇಜು ವಾತಾವರಣ ಉತ್ತಮ ಅಂಕ ಗಳಿಸಲು ನೆರವಾಗಿದೆ ಎಂದರು.
ಈ ಇಬ್ಬರನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಟಿ. ಕೃಷ್ಣಪ್ಪ ಸನ್ಮಾನಿಸಿ, ಅಭಿನಂಧಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದ ಗ್ರಾಮಾಂತರ ಪ್ರತಿಭೆಗಳು ದೇಶಕ್ಕೆ ಕಾಣುವಂತಹ ವ್ಯವಸ್ಥೆಯಾಗಬೇಕು. ಹೀಗಾಗಿ ವಿದ್ಯಾನಿಧಿ ಕಾಲೇಜು ಸ್ಥಾಪನೆ ಮಾಡಿದ್ದೇನೆ. ಜೊತೆಗೆ ನಾನು ಒಬ್ಬ ಕೃಷಿಕನಾಗಿದ್ದು, ಬಡತನದಿಂದ ಬಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಸಿಬ್ಬಂದಿ ವರ್ಗ ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದಕ್ಕೆ ಉತ್ತಮ ಫಲಿತಾಂಶ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.