ಬೆಂಗಳೂರು: ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್, ಪಿಚ್ಚಿಗೊಂಡ, ಬಸವ, ವಿಜಯ ಕುಮಾರ್, ಕಬಾಡು ಮತ್ತು ಕುಮಾರ ಬಂಧಿತ ಆರೋಪಿಗಳು. ಎರಡು ತಿಂಗಳ ಹಿಂದೆ ದೇವನಹಳ್ಳಿಯ ಪ್ರಖ್ಯಾತ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಹುಂಡಿ ಕಳ್ಳತನವಾಗಿತ್ತು. ಸಿಸಿಟಿವಿ ಕ್ಯಾಮೆರಾ ಇದ್ದರೂ ಹಿಂದಿನ ಬಾಗಿಲಿನಿಂದ ಬಂದು ಖದೀಮರು ಹುಂಡಿಯನ್ನು ದೋಚಿದ್ರು. ಇವರು ಮೈಸೂರು ಮತ್ತು ಮಂಡ್ಯ ಮೂಲದ ಅಲೆಮಾರಿ ಜನರಾಗಿದ್ದು, ದೇವನಹಳ್ಳಿಯ ಕೋಟೆ ಸರ್ಕಲ್ನ ಸರ್ಕಾರಿ ಜಮೀನಿನಲ್ಲಿ ಕಳ್ಳತನ ಮಾಡುವುದಕ್ಕೂ ಒಂದು ವಾರದ ಹಿಂದೆ ವಾಸವಿದ್ದರು ಎಂದು ತಿಳಿದು ಬಂದಿದೆ.
ಇನ್ನೂ ಒಂದು ವಾರಗಳ ಕಾಲ ಕಾದು ಸಮಯ ನೋಡಿ ಕಳ್ಳತನ ಮಾಡಿದ ಈ ಖತರ್ನಾಕ್ ಗ್ಯಾಂಗ್, ಯಾರಿಗೂ ತಿಳಿಯಬಾರದು ಎಂದು ಸ್ಥಳಗಳನ್ನು ಬದಲಾಯಿಸುತ್ತಾ ಶೋಕಿ ಜೀವನ ನಡೆಸುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಇದರ ಆಧಾರದ ಮೇಲೆ ಕಳ್ಳರ ಸುಳಿವನ್ನು ಪತ್ತೆ ಮಾಡಿದ ದೇವನಹಳ್ಳಿ ಪೊಲೀಸರು ಸೆಂಟ್ರಲ್ ಜೈಲ್ನಲ್ಲಿದ್ದ ಕಳ್ಳರನ್ನು ಬಂಧಿಸಿ ಕರೆ ತಂದಿದ್ದಾರೆ.
ಇಷ್ಟೇ ಅಲ್ಲದೆ ಇವರ ಮೇಲೆ ವಿವಿಧ ಠಾಣೆಗಳಲ್ಲಿ ಹತ್ತರಿಂದ ಹನ್ನೆರಡು ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಕರೆ ತಂದ ಪೊಲೀಸರು ಮಜರು ಮಾಡಿಸಲು ದೇವಸ್ಥಾನಕ್ಕೆ ಕರೆದುಕೊಂಡು ಬಂದು, ಯಾವ ರೀತಿ ಕಳ್ಳತನ ಮಾಡಿದ್ದಾರೆ ಅನ್ನೋದನ್ನು ತಿಳಿದುಕೊಂಡರು.