ಬೆಂಗಳೂರು: ಹೊಸಕೋಟೆ ಉಪ ಚುನಾವಣೆ ಕಣ ರಂಗೇರುತ್ತಿದ್ದು, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಪರ ತಾಯಿ ಉಮಾ ಬಚ್ಚೇಗೌಡ ಪ್ರಚಾರ ಆರಂಭಿಸಿದ್ದಾರೆ.
ಹೊಸಕೋಟೆ ತಾಲೂಕಿನ ಕೊಳತೂರಿನಲ್ಲಿ ಪ್ರಚಾರ ನಡೆಸಿ ಮಾತನಾಡಿದ ಉಮಾ ಬಚ್ಚೇಗೌಡ, ಮಗನ ಪರವಾಗಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದೆ, ಇದೀಗ ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ. ಶರತ್ ನಿಮ್ಮನೆ ಮಗ, ಅವನು ಎಲ್ಲವನ್ನು ಬಿಟ್ಟು ಹೊಸಕೋಟೆಯಲ್ಲಿ ಗೆಲ್ಲಲೇಬೇಕು ಅಂತಾ ಬಂದಿದ್ದಾನೆ. ನನ್ನ ಮಗ ಗೆದ್ದೇ ಗೆಲ್ಲುತ್ತಾನೆ, ತಾಲೂಕಿನಾದ್ಯಂತ ನಾನು ಪ್ರಚಾರ ಮಾಡ್ತೇನೆ. ತಂದೆ ಮಕ್ಕಳ ಸಂಬಂಧ ಹಾಗೆಯೇ ಇರುತ್ತೆ. ರಾಜಕೀಯ ಬೇರೆ ಬೇರೆ ಅವರವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.
ಬಚ್ಚೇಗೌಡರು ಪ್ರಚಾರಕ್ಕೆ ಬರಲು ಸಾಧ್ಯವಿಲ್ಲ, ಹೀಗಾಗಿ ನಾನು ಬಂದಿದ್ದೇನೆ. ಬಚ್ಚೇಗೌಡರು ಬೆಂಗಳೂರಿನಲ್ಲೆ ಇದ್ದಾರೆ. ಅವರಿಗೆ ಆರೋಗ್ಯ ಸರಿಯಿಲ್ಲ, ವೈದ್ಯರು ವಿಶ್ರಾಂತಿ ಪಡೆಯಲು ತಿಳಿಸಿದ್ದು, ಮನೆಯಲ್ಲೆ ಇದ್ದಾರೆ. ಎಂಟಿಬಿ ಪರ ಪ್ರಚಾರಕ್ಕೆ ಹೋಗುವುದು ಬಿಡುವುದು ಬಚ್ಚೇಗೌಡರಿಗೆ ಬಿಟ್ಟಿದ್ದು ಎಂದು ತಿಳಿಸಿದರು.