ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಸಹೋದರಿಯ ಮದುವೆ ಮಾಡಲು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ದಾಬಸ್ ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಂಎಸ್ ಪಾಳ್ಯದ ಶೇಖ್ ಸಲ್ಮಾನ್ ಮತ್ತು ತಬರೇಜ್ ಬಂಧಿತ ಆರೋಪಿಗಳು. ದಾಬಸ್ ಪೇಟೆ ಹಳೆ ಸಂತೆಬೀದಿಯ ಛಾಯಶಂಕರ್ ಎಂಬುವರು ಡಿಸೆಂಬರ್ 10ರಂದು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿಗಳು ಅವರ ಮನೆಯ ಹಿಂಬದಿಯ ಬಾಗಿಲು ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಕುರಿತು ಛಾಯಶಂಕರ್, ದಾಬಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ವಿದ್ಯಾರಣ್ಯಪುರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 15 ಲಕ್ಷದ 8 ಸಾವಿರ ರೂ. ಮೌಲ್ಯದ 300 ಗ್ರಾಂ ಚಿನ್ನ, 1,420 ಗ್ರಾಂ ಬೆಳ್ಳಿ, 5 ವಾಚ್, 2 ಕ್ಯಾಮೆರಾ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ಸಮಯದಲ್ಲಿ ಶೇಖ್ ಸಲ್ಮಾನ್ ಸಹೋದರಿಯ ಮದುವೆಗಾಗಿ ಮನೆಗಳ್ಳತನ ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಕದ್ದ ಚಿನ್ನಾಭರಣಗಳನ್ನ ಶೇಖ್ ಸಲ್ಮಾನ್ ತನ್ನ ಸ್ನೇಹಿತ ತಬರೇಜ್ ಮೂಲಕ ಗಿರವಿ ಇಡುತ್ತಿದ್ದ. ಟೀ ಕುಡಿಯುವ ನೆಪದಲ್ಲಿ ನಾಲ್ಕೈದು ದಿನ ಮನೆಯವರ ಚಲನ-ವಲನ ಗಮನಿಸಿ ಕಳ್ಳತನ ಮಾಡುತ್ತಿದ್ದರು.