ಹೊಸಕೋಟೆ: ತಾಲ್ಲೂಕಿನ ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮದ 35 ವರ್ಷದ ವ್ಯಕ್ತಿ ಹಾಗೂ ಅತನ 11 ವರ್ಷದ ಮಗಳಲ್ಲಿ ಕೊರೊನಾ ವೈರಾಣು ಸೋಂಕು ಇರುವುದು ನಿನ್ನೆ ದೃಢ ಪಟ್ಟಿದೆ.
ಕೊರೊನಾ ಸೋಂಕು ದೃಢಪಟ್ಟ 35 ವರ್ಷದ ವ್ಯಕ್ತಿಯು ಪ್ರಕರಣ ಸಂಖ್ಯೆ 169ರ ವ್ಯಕ್ತಿಯ ಸಹೋದರರಾಗಿದ್ದು, ಪ್ರಸ್ತುತ ತಂದೆ ಮತ್ತು ಮಗಳು ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಐದು ವ್ಯಕ್ತಿಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರು ಕೇರಳ ರಾಜ್ಯದ ನಿವಾಸಿ ಹಾಗೂ ಉಳಿದ ನಾಲ್ಕು ಜನರು ಹೊಸಕೋಟೆ ತಾಲ್ಲೂಕಿನ ಬೈಲನರಸಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಲನರಸಾಪುರ ಗ್ರಾಮದ ನಾಲ್ವರು ವ್ಯಕ್ತಿಗಳಲ್ಲಿ ಕೊರೋನಾ ವೈರಸ್ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಹೋಂ ಕ್ವಾರಂಟೈನ್ನಲ್ಲಿರಿಸಿ ಸಿ.ಆರ್.ಪಿ.ಸಿ. 1973 ರ ಕಲಂ 144(3)ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜನರು ಗುಂಪು ಕಟ್ಟಿಕೊಂಡು ಓಡಾಡುತ್ತಿರುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡುಬಂದಿದೆ.
ಇದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೈಲನರಸಾಪುರ ಗ್ರಾಮದ ಎಲ್ಲಾ ಕುಟುಂಬಗಳನ್ನು ಹೋಂ ಕ್ವಾರಂಟೈನ್ನಲ್ಲಿಟ್ಟು, ಮನೆ ಮತ್ತು ಗ್ರಾಮದಿಂದ ಹೊರಗೆ ಬಾರದಂತೆ ಹಾಗೂ ಗ್ರಾಮಕ್ಕೆ ಯಾರು ಪ್ರವೇಶಿಸದಂತೆ ಆದೇಶಿಸಲಾಗಿದೆ.
ಅಲ್ಲದೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಒಂದು ರಿಸರ್ವ್ ಪೊಲೀಸ್ ಪಡೆಯ ವಾಹನವನ್ನು ನಿಯೋಜನೆ ಮಾಡಲಾಗಿದೆ. ಲಾಕ್ ಡೌನ್ ಉಲ್ಲಂಘನೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮಕೈಗೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ನಿರ್ದೇಶಿಸಿದ್ದಾರೆ.