ನೆಲಮಂಗಲ: ಪ್ರತಿಪಕ್ಷಗಳ ಟೀಕೆಗೆ ತುತ್ತಾಗಿದ್ದ ದೇಶದ ಅತಿದೊಡ್ಡ ಬಿಐಇಸಿ ಕೋವಿಡ್ ಕೇರ್ ಸೆಂಟರ್ ಕೊನೆಗೂ ಉದ್ಘಾಟನೆಗೊಂಡಿದ್ದು, ನಾಳೆಯಿಂದಲೇ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಿ ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ ಬೆಡ್ ಒದಗಿಸಲು ಸರ್ಕಾರಕ್ಕೆ ತಲೆನೋವಾಗಿತ್ತು. ಈ ನಿಟ್ಟಿನಲ್ಲಿ ತುಮಕೂರು ರಸ್ತೆಯ ಮಾದವಾರದಲ್ಲಿರುವ ಬಿಐಇಸಿ ಮೈದಾನದಲ್ಲಿ 10 ಸಾವಿರಕ್ಕೂ ಅಧಿಕ ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆಯಿತು.
ಆರೈಕೆ ಕೇಂದ್ರದಲ್ಲಿ 10,000 ಪೈಕಿ 5,000 ಬೆಡ್ಗಳು ಸಿದ್ಧಗೊಂಡಿದ್ದು, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಅವರು ವೈದ್ಯರಿಗೆ ಹೂಗುಚ್ಛ ನೀಡುವ ಮುಖಾಂತರ ಚಾಲನೆ ನೀಡಿದರು.
ಆರ್. ಅಶೋಕ್ ಮಾತನಾಡಿ, 5,000 ಹಾಸಿಗೆಗಳ ವ್ಯವಸ್ಥೆ ಸಿದ್ಧಗೊಂಡಿದೆ. ವೈದ್ಯರಿಗೆ ಪ್ರತ್ಯೇಕವಾಗಿ 1,500 ಬೆಡ್‌ಗಳನ್ನು ಮೀಸಲಿಡಲಾಗಿದೆ. ಎಲ್ಲಾ ಕಡೆ ಆಧುನಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿತರು ಮಾನಸಿಕವಾಗಿ ಕುಗ್ಗಿರುತ್ತಾರೆ. ಮನೋರಂಜನೆ ದೃಷ್ಟಿಯಿಂದ ಟಿವಿ ಸೇರಿದಂತೆ ಇತರೆ ವ್ಯವಸ್ಥೆ ನೀಡಲಾಗಿದೆ ಎಂದರು.
ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ನಿಯಂತ್ರಣ ಕೊಠಡಿ, ಸುರಕ್ಷಿತಾ ಕ್ರಮಕ್ಕೆ ಪೊಲೀಸ್, ಅಗ್ನಿಶಾಮಕ ಸಹ ನಿಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಡ್‌ಗಳನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
ಪ್ರತಿಪಕ್ಷದ ಟೀಕಿಗೆ ಪ್ರತಿಕ್ರಿಯಿಸಿದ ಅವರು, ಕೋಟಿ- ಕೋಟಿ ಅವ್ಯವಹಾರವಾಗಿದೆ ಎಂದು ಹೇಳುತ್ತಾರೆ. ಪ್ರಾರಂಭದಲ್ಲಿ ಸಾಮಾಗ್ರಿಗಳನ್ನು ಬಾಡಿಗೆಗೆ ಪಡೆದಿದ್ದು, 7 ಸಾಮಾಗ್ರಿಗಳನ್ನು ₹ 5 ಕೋಟಿಗೆ ಖರೀದಿಸಿದ್ದೇವೆ. ಫ್ಲೋರಿಂಗ್‌ಗೆ ₹ 2.85 ಕೋಟಿ, 19 ಸಾಮಗ್ರಿಗಳಿಗೆ ₹ 4.96 ಕೋಟಿ ತಿಂಗಳಿಗೆ ಬಾಡಿಗೆ ನೀಡುತ್ತೇವೆ. ತಿಂಗಳಿಗೆ ₹ 11.4 ಕೋಟಿ ಖರ್ಚು ಬರುತ್ತದೆ ಎಂದರು.
ಇದೆಲ್ಲಾ ಮುಗಿದ ಬಳಿಕ ಖರೀದಿಸಿರುವ ಸಾಮಾಗ್ರಿಗಳನ್ನು ಆಸ್ಪತ್ರೆ ಹಾಗೂ ಹಾಸ್ಟೆಲ್‌ಗಳಿಗೆ ಕಳುಹಿಸುತ್ತೇವೆ. ಇದರಲ್ಲಿ ಯಾವುದು ಅವ್ಯವಹಾರ ನಡೆದಿಲ್ಲ. ಲೆಕ್ಕ ತಪ್ಪಬಾರದು, ಲೆಕ್ಕ ಸರಿಯಾಗಿರಬೇಕು. ಹಿಂದಿನ ಸರ್ಕಾರ ಖರೀದಿ ಮಾಡಿರುವುದು ನಮಗೆ ಮಾನದಂಡ ಅಲ್ಲ. ನಾಲ್ಕಾರು ಬಾರಿ ಪರಿಶೀಲಿಸಿ ವೆಂಟಿಲೇಟರ್ ಖರೀದಿಸಿದ್ದೇವೆ ಎಂದು ವಿವರಿಸಿದರು.
ಅಶ್ವತ್ಥನಾರಾಯಣ ಮಾತನಾಡಿ, ಕೋವಿಡ್ ಕೇರ್ ಸೆಂಟರ್‌ಗೆ ಅರಮನೆ ಮೈದಾನ, ಅಪಾರ್ಟ್ಮೆಂಟ್ಗಳಲ್ಲೂ ವ್ಯವಸ್ಥೆ ಮಾಡಿಕೊಡಲಾವುದು. ಐಎಲ್ಐ, ಸಾರಿ (ಎಸ್ಎಆರ್ಐ) ಕೇಸ್‌ಗಳನ್ನು ಪತ್ತೆ ಹಚ್ಚಿ, ಚಿಕಿತ್ಸೆ ಕೊಡುವ ಮತ್ತು 24 ಗಂಟೆಗಳೊಳಗೆ ಆರ್ಟಿಪಿಸಿಆರ್ ಪರೀಕ್ಷೆ ಫಲಿತಾಂಶ ನೀಡುವ ಉದ್ದೇಶವಿದೆ. ಸದ್ಯ ನಮ್ಮಲ್ಲಿ 23 ಸಾವಿರ ಪರೀಕ್ಷೆ ಸಾಮರ್ಥ್ಯದ ಲ್ಯಾಬ್‌ಗಳಿದ್ದು, ಪ್ರತಿದಿನ 20 ಸಾವಿರ ಸ್ವಾಬ್ ಪರೀಕ್ಷೆ ಮಾಡುತ್ತೇವೆ ಎಂದರು.