ನೆಲಮಂಗಲ/ಬೆಂಗಳೂರು: ಹೊರವಲಯ ನೆಲಮಂಗಲ ತಾಲೂಕಿನ ದೇವರ ಹೊಸಹಳ್ಳಿ ಕೆರೆ ಭರ್ತಿಯಾದ ಹಿನ್ನೆಲೆ ಸಿದ್ದಗಂಗಾ ಮಠದ ಶ್ರೀಗಳು ಗಂಗಾರತಿ ಸಲ್ಲಿಸಿದರು.
1562ರಲ್ಲಿ ಅಂದಿನ ಮೈಸೂರು ಒಡೆಯರಾದ ಚಿಕ್ಕರಾಜೇ ಅರಸ್ ನಿರ್ಮಿಸಿದ್ದ 169 ಎಕರೆ ವಿಸ್ತೀರ್ಣವುಳ್ಳ ಬೃಹತ್ ಕೆರೆ ಭರ್ತಿಯಾಗಿದೆ. ನಾಲ್ಕು ಬೆಟ್ಟಗಳಾದ ಸಿದ್ದರ ಬೆಟ್ಟ, ಹಳೆನಿಜಗಲ್ ಬೆಟ್ಟ, ವೀರಭದ್ರೇಶ್ವರ ಬೆಟ್ಟ, ರಾಮದೇವರ ಬೆಟ್ಟಗಳ ನಡುವೆ ಇರುವ 169 ಎಕರೆ ವಿಸ್ತೀರ್ಣವುಳ್ಳ ದೇವರ ಹೊಸಹಳ್ಳಿ ಕೆರೆ ಇತ್ತೀಚೆಗೆ ಸುರಿದ ಮಳೆಯಿಂದ ತುಂಬಿ ಕೋಡಿ ಹರಿದಿದೆ. ಈ ಹಿನ್ನೆಲೆ ತುಮಕೂರಿನ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಪಾದ ಪೂಜೆ ನೆರವೇರಿಸಲಾಯಿತು. ಬಳಿಕ ಕೆರೆಗೆ ಗಂಗಾರತಿ ಮಾಡಿದ ಸಿದ್ದಗಂಗಾ ಮಠದ ಶ್ರೀಗಳು, ನಂತರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವೀರಗಾಸೆ, ನಂದಿಧ್ವಜ, ತಮಟೆ ವಾದನ, ಶಿವ ಕುಣಿತ ಸೇರಿದಂತೆ ಜಾನಪದ ಕಲಾ ತಂಡಗಳಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಗ್ರಾಮಸ್ಥರು ಕೆರೆಯಲ್ಲಿ ದೀಪಗಳನ್ನು ಬಿಟ್ಟು, ಭದ್ರ ಕಾಳಮ್ಮ ಸಮೇತ ವೀರಭದ್ರಸ್ವಾಮಿಯ ಪೂಜೆ, ಹೋಮ ನಡೆಸಿದರು.
ಈ ಕೆರೆ ತುಂಬಿದರೆ ಸುಮಾರು 1,000 ಎಕರೆಗೆ ನೀರುಣಿಸಲಿದೆ. ಈ ಕೆರೆಯಿಂದ ಸುತ್ತಮುತ್ತಲಿನ ಬೋರ್ವೆಲ್ ನೀರು ಪೂರ್ಣವಾಗಿ, ರೈತರಿಗೆ ಅನುಕೂಲವಾಗಿದೆ. ಬೆಳೆಗಳಾದ ಪಚ್ಚ ಬಾಳೆ, ಅಡಿಕೆ, ಭತ್ತ, ತೆಂಗು, ಭತ್ತ ಇನ್ನಿತರೆ ಬೆಳೆಗಳಿಗೆ ಜೀವಜಲ ಸಿಗಲಿದೆ. ಕಳೆದ ನಾಲ್ಕು ವರ್ಷಗಳಿಂದ ಕೆರೆ ತುಂಬಿರಲಿಲ್ಲ. ಈ ವರ್ಷ ಕೆರೆ ತುಂಬಿರುವುರು ರೈತರ ಸಂತಸಕ್ಕೆ ಕಾರಣವಾಗಿದೆ.