ಬನ್ನೇರುಘಟ್ಟ: ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆಯ ಪಕ್ಕದಲ್ಲಿದ್ದ ಬಾವಿ ಕಾಣದೆ ಅದರೊಳಗೆ ಬೈಕ್ ಸವಾರ ಬಿದ್ದಿರುನ ಘಟನೆ ನಡೆದಿದೆ.
ಬನ್ನೇರುಘಟ್ಟ ಸಮೀಪದ ಕಾಳೇನ ಅಗ್ರಹಾರದ ಸ್ಮಶಾನದ ರಸ್ತೆಯ ಪಕ್ಕದಲ್ಲಿದ್ದ ಬಾವಿಯೊಂದಕ್ಕೆ ಬೈಕ್ ಸವಾರ ಬಿದ್ದಿದ್ದು, ಅಲ್ಲಿದ್ದ ಸ್ಥಳೀಯರ ಸಮಯ ಪ್ರಜ್ಞೆಯಿಂದ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ವಾಹನ ಸವಾರರು ಪರದಾಟ ನಡೆಸುವಂತಾಯಿತು. ಬನ್ನೇರುಘಟ್ಟ ರಸ್ತೆಯ ಬೇಗೂರು, ಹುಳಿಮಾವು, ಗೊಟ್ಟಿಗೆರೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ತಗ್ಗು ಪ್ರದೇಶಕ್ಕೆ ಮಳೆ ನೀರು ನುಗ್ಗಿದೆ. ಹುಳಿಮಾವು ಸಮೀಪದ ಡಿಎಲ್ಎಫ್ ಬಡಾವಣೆಯ ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ದ್ವಿಚಕ್ರ ವಾಹನಗಳು ಮಳೆಯಿಂದ ಹಾನಿಯಾಗಿದೆ.
ಮಳೆ ಬಂದಾಗ ಈ ಭಾಗದಲ್ಲಿ ಪದೇ ಪದೇ ಇದೇ ರೀತಿ ಅವಾಂತರ ಸೃಷ್ಟಿಯಾಗುತ್ತಿದ್ದರು ಇಲ್ಲಿನ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೆಪ ಮಾತ್ರಕ್ಕೆ ಬಂದು ಮತ್ತೆ ಈ ರೀತಿ ಆಗದಂತೆ ಸರಿಪಡಿಸುವುದಾಗಿ ಹೇಳಿ ಹೋಗುತ್ತಾರೆ. ಆದರೆ, ಪ್ರತಿ ಬಾರಿ ಮಳೆ ಬಂದ ಸಂದರ್ಭದಲ್ಲಿ ಸಮಸ್ಯೆಗಳನ್ನ ಎದುರಿಸುವುದು ಮಾತ್ರ ಇನ್ನೂ ತಪ್ಪಿಲ್ಲ. ನಿನ್ನೆ ಸುರಿದ ಮಳೆಯಿಂದ ನರಕ ದರ್ಶನ ವಾಗಿದೆ. ಇನ್ನು ಸ್ಥಳಕ್ಕೆ ಅಧಿಕಾರಿಗಳು ಬಂದಿಲ್ಲ ಎಂದು ಸ್ಥಳೀಯರು ಅಲವತ್ತುಕೊಂಡರು.