ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಹುಂಡಿ ಹಣ ಎಣಿಕೆ ಮಾಡಲಾಗಿದೆ. ಈ ಬಾರಿಯೂ ವಿದೇಶಿ ನೋಟುಗಳು ಹಾಗೂ ಅಮಾನ್ಯಗೊಂಡಿರುವ ನೋಟುಗಳು ದೊರೆತಿವೆ. ಹುಂಡಿಯಲ್ಲಿ ಒಟ್ಟು 46,24,326 ರೂ. ಸಂಗ್ರಹವಾಗಿದೆ. ಇದರೊಂದಿಗೆ 2.6 ಕೆಜಿ ಬೆಳ್ಳಿ, 5.4 ಗ್ರಾಂ ಚಿನ್ನವನ್ನೂ ಕೂಡ ಭಕ್ತರು ಕಾಣಿಕೆಯಾಗಿ ಸಲ್ಲಿಸಿದ್ದಾರೆ.
ಅಮೆರಿಕ, ಕೆನಡಾ, ಸಿಂಗಾಪರ್ನ ನೋಟುಗಳನ್ನು ಭಕ್ತರು ಹಾಕಿರುವುದು ವಿಶೇಷ. ಅಷ್ಟೇ ಅಲ್ಲದೆ ಅಮಾನ್ಯಗೊಂಡಿರುವ ₹500 ಮುಖಬೆಲೆಯ 22 ನೋಟುಗಳು ಹಾಗೂ ₹ 1000 ಮುಖಬೆಲೆಯ ಒಂದು ನೋಟ್ ಹುಂಡಿಯಲ್ಲಿ ಸಿಕ್ಕಿದೆ. ಪ್ರತಿ ತಿಂಗಳಿನಂತೆ ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದೆ. ಎಣಿಕೆಯನ್ನು ದೇವಾಲಯಕ್ಕೆ ಆಗಮಿಸಿದ ಭಕ್ತರು ಮಾಡಿದ್ದು, ಮುಜರಾಯಿ ತಹಶೀಲ್ದಾರ್ ನರಸಿಂಹಯ್ಯ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ದೇವಾಲಯ ಅಧೀಕ್ಷಕ ನಾರಾಯಣಸ್ವಾಮಿ, ಪ್ರಧಾನ ಅರ್ಚಕ ಎನ್.ಶ್ರೀನಿಧಿ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.