ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ವಾಹನ ಕಳವು, ಸರಗಳ್ಳತನ, ಗಾಂಜಾ ಪ್ರಕರಣ ಸೇರಿದಂತೆ 57 ಪ್ರಕರಣಗಳಿಗೆ ಸಂಬಂಧಿಸಿದ 30 ಜನ ಆರೋಪಿಗಳನ್ನು ಬಂಧಿಸಿರುವ ದೊಡ್ಡಬಳ್ಳಾಪುರ ವಿಭಾಗದ ಪೊಲೀಸರು, ಆರೋಪಿಗಳಿಂದ ಅಪಾರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ದೊಡ್ಡಬಳ್ಳಾಪುರ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಿಂಡಿ ಮಾತನಾಡಿ, ವಾಹನ ಕಳವು, ಸರಗಳ್ಳತನ, ಗಾಂಜಾ ಮಾರಾಟ, ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 1 ಕೋಟಿ 20 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಇಂಥ ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಜಾಗೃತಿಯಿಂದ ಕೆಲಸ ಮಾಡಬೇಕೆಂದು ಹೇಳಿದರು.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಎಸ್ಪಿ, ಸಾಲ ಕೊಡಿಸುವುದಾಗಿ ನಂಬಿಸಿ 40 ವರ್ಷದ ಪುಟ್ಟಮ್ಮ ಎಂಬ ಮಹಿಳೆಯನ್ನು ಬ್ಯಾಂಕ್ಗೆ ಆರೋಪಿ ಮಂಜೇಶನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದನು. ಈ ವೇಳೆ ಮೈಮೇಲಿದ್ದ ಚಿನ್ನಾಭರಣ ಇದ್ದರೆ ಸಾಲ ನೀಡುವುದಿಲ್ಲವೆಂದು ನಂಬಿಸಿ ಆಭರಣಗಳನ್ನು ಬೈಕ್ ಡಿಕ್ಕಿಯಲ್ಲಿ ಇಟ್ಟು ಮಹಿಳೆಗೆ ವಂಚಿಸಿದ್ದನು. ನಂತರ ಚಿನ್ನಾಭರಣ ಸಮೇತ ಪರಾರಿಯಾಗಿದ್ದನು. ಮಹಿಳೆ ನೀಡಿದ ದೂರಿನ ಮೇರೆಗೆ ವಂಚಿಸಿ ಕಳ್ಳತನ ಮಾಡಿದ ಆರೋಪದಡಿ ಮಂಜೇಶನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಜಿಲ್ಲೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಂಟಿಕೊಂಡಿರುವುದರಿಂದ ಜಿಲ್ಲೆಯಲ್ಲಿ ಗಾಂಜಾ ಸೇವನೆ ಅಧಿಕವಾಗಿದೆ. ಗಾಂಜಾ ಸೇವನೆಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಬೇಕು. ಈಗಾಗಲೇ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ 44.8 ಕೆ.ಜಿ ತೂಕದ 15 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಗಾಂಜಾ ಮಾರಾಟ ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.
ಇದನ್ನೂಓದಿ:ಪತ್ನಿ, ಇಬ್ಬರು ಪುತ್ರಿಯರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ಟೇಬಲ್!