ದೊಡ್ಡಬಳ್ಳಾಪುರ(ಬೆಂ.ಗ್ರಾಮಾಂತರ) : ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಲು ರೋಗಿಗಳು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಬರುತ್ತಿದ್ದರು. ಆದರೆ, ಡಯಾಲಿಸಿಸ್ ನಿರ್ವಹಣೆಯ ಜವಾಬ್ದಾರಿ ಹೊತ್ತ ಬಿಆರ್ಎಸ್ ಸಿಬ್ಬಂದಿ ಡಯಾಲಿಸಿಸ್ ಚಿಕಿತ್ಸಾ ಪರಿಕರಗಳ ಸಮೇತ ರೋಗಿಗಳನ್ನು ಹೊರ ಹಾಕಿರುವ ಘಟನೆ ನಡೆದಿದೆ.
ಈ ಆಸ್ಪತ್ರೆಯಲ್ಲಿ 30 ರೋಗಿಗಳ ಸಾಮರ್ಥ್ಯದ ಡಯಾಲಿಸಿಸ್ ಚಿಕಿತ್ಸಾ ಘಟಕವಿದೆ. ಆದರೆ, ಬಿಆರ್ಎಸ್ ಸಿಬ್ಬಂದಿ ಇಂದು ಡಯಾಲಿಸಿಸ್ ಮಾಡಿಸಲು ಬಂದ ರೋಗಿಗಳನ್ನು ಏಕಾಏಕಿ ಹೊರಹಾಕಿ, ಡಯಾಲಿಸಿಸ್ ಘಟಕಕ್ಕೆ ಬೀಗ ಹಾಕಿದ್ದಾರೆ. ಡಯಾಲಿಸಿಸ್ ರೋಗಿಗಳು ನಮಗೆ ಇಲ್ಲೇ ಚಿಕಿತ್ಸೆ ನೀಡಿ. ಬೇರೆಲ್ಲೂ ಹೋಗಲಿಕ್ಕೆ ನಮ್ಮ ಕೈಲಾಗುವುದಿಲ್ಲ ಎಂದು ಅಂಗಲಾಚಿದ್ದಾರೆ. ಆದರೆ, ಬಿಆರ್ಎಸ್ ಸಿಬ್ಬಂದಿ ದರ್ಪದಿಂದ ಇಲ್ಲಿ ಯಾರೂ ನನ್ನ ಜೊತೆ ಕೆಲಸ ಮಾಡುತ್ತಿಲ್ಲ. ನಾನೊಬ್ಬನೇ ಎಲ್ಲಾ ಕೆಲಸ ಮಾಡಲಿಕ್ಕೆ ಆಗಲ್ಲ. ನಿಮ್ಮ ಬಟ್ಟೆ-ಬರೆ, ಪರಿಕರಗಳನ್ನು ತೆಗೆದುಕೊಂಡು ಚಿಕ್ಕಬಳ್ಳಾಪುರಕ್ಕೆ ಹೋಗಿ, ಅಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ರೋಗಿಗಳು ಕಣ್ಣೀರಿಟ್ಟಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುವವರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ಸರ್ಕಾರ ಪ್ರತಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭಿಸಲು ಬಿಆರ್ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಜೀವಿನಿ ಸಂಸ್ಥೆಗೆ ಗುತ್ತಿಗೆ ನೀಡಿದೆ. ಇವೆರಡೂ ಸಂಸ್ಥೆಗಳು ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಪ್ರಾರಂಭಿಸಿ ನಿರ್ವಹಣೆ ಮಾಡುತ್ತಿವೆ. ಆದರೆ, ಸಮರ್ಪಕ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿವೆ.
ಈ ಬಗ್ಗೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ರಮೇಶ್ ಬಳಿ ವಿಚಾರಿಸಿದ ಅವರು ಜಿಲ್ಲಾ ವೈದ್ಯಾಧಿಕಾರಿ ಮಂಜುಳಾ ದೇವಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ ಡಿಹೆಚ್ಒ, ಡಯಾಲಿಸಿಸ್ ಘಟಕಕ್ಕೆ ಬೀಗ ಜಡಿದು ಉದ್ಧಟತನ ಮೆರೆದಿದ್ದ ಟೆಕ್ನಿಷಿಯನ್ನ ಕೆಲಸದಿಂದ ತೆಗೆದಿದ್ದಾರೆ. ಬಳಿಕ ಡಯಾಲಿಸಿಸ್ ಮಾಡಿಸಿಕೊಳ್ಳದೆ ಅಶಕ್ತರಾಗಿದ್ದವರಿಗೆ ದೇವನಹಳ್ಳಿಯಿಂದ ಸಿಬ್ಬಂದಿ ಕರೆಸಿ, ಡಯಾಲಿಸಿಸ್ ಮಾಡಲು ವ್ಯವಸ್ಥೆ ಮಾಡಿದ್ದಾರೆ.