ದೊಡ್ಡಬಳ್ಳಾಪುರ: ನರೇಂದ್ರ ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿ ಸ್ವಾತಂತ್ರ್ಯ ಭಾರತದಲ್ಲಿ ಯಾರೂ ಬಂದಿಲ್ಲ. ಹಾಗೆಯೇ ರಾಜ್ಯದಲ್ಲಿ ಸುಳ್ಳು ಹೇಳುವುದರಲ್ಲಿ ಯಡಿಯೂರಪ್ಪ ಚಿಕ್ಕ ನರೇಂದ್ರ ಮೋದಿ ಇದ್ದಂತೆ ಎಂದು ಬಿಜೆಪಿ ಪಕ್ಷದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ನೇಕಾರರ ಚಿಂತನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ನೇಕಾರರು ಬಹಳಷ್ಟು ಕಷ್ಟದಲ್ಲಿದ್ದಾರೆ. ಕೊರೊನಾ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ನೇಕಾರರ ಕುಟುಂಬಕ್ಕೆ ಸರ್ಕಾರ ಇದುವರೆಗೂ ಪರಿಹಾರ ನೀಡಿಲ್ಲ. ನಮ್ಮ ಸರ್ಕಾರ ಇದ್ದಾಗ ಈ ರೀತಿ ಗಮನಕ್ಕೆ ತಂದಿದ್ದರೆ ಅಂದೇ ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವಂತೆ ಮಾಡುತ್ತಿದ್ದೆ. ಸರ್ಕಾರ ಕೃಷಿಕರು ಮತ್ತು ನೇಕಾರರನ್ನು ರಕ್ಷಣೆ ಮಾಡದಿದ್ದರೆ ಮತ್ತೆ ಯಾರನ್ನು ರಕ್ಷಣೆ ಮಾಡುತ್ತದೆ ಎಂದು ಪ್ರಶ್ನಿಸಿದರು.
ಕೊರೊನಾದಿಂದ ರಾಜ್ಯದ ಜನ ಸಂಕಷ್ಟದಲ್ಲಿದ್ದಾಗ ನಾನು ಯಡಿಯೂರಪ್ಪಗೆ ಸಲಹೆ ನೀಡಿದ್ದೆ. ರಾಜ್ಯದ ಒಂದು ಕೋಟಿ ಜನರಿಗೆ 10 ಸಾವಿರ ನೀಡುವಂತೆ ಹೇಳಿದ್ದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದರೆ, ಇದೀಗ ಅವರ ಮಗ ಆರ್ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾನೆ ಎಂದು ಆರೋಪಿಸಿದರು.
ವೃದ್ಧಾಪ್ಯ ವೇತನಕ್ಕೆ ಹಣ ನೀಡಲು ಸರ್ಕಾರದ ಬಳಿ ಹಣವಿಲ್ಲ. ನಿಗಮಕ್ಕೆ ನೀಡಲು ಹಣವಿದೆಯೇ? ಜನರ ದುಡ್ಡನ್ನು ವಿವೇಚನೆಯಿಂದ ಖರ್ಚು ಮಾಡಬೇಕು. ಇಲ್ಲದಿದ್ದರೆ ಸರ್ಕಾರ ನಡೆಸುವುದಕ್ಕೇ ನಾಲಾಯಕ್. 4 ಲಕ್ಷದ 10 ಸಾವಿರ ಕೋಟಿ ರೂ. ಸರ್ಕಾರದಲ್ಲಿ ಸಾಲವಿದೆ. ನಾವು ನೀವೆಲ್ಲಾ ಈಗ ಸಾಲಗಾರರು ಎಂದರು.
ಕೇಂದ್ರದಲ್ಲಿ ಮೋದಿ ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ ಹಂಚುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಇಲ್ಲಿಯವರೆಗೂ ಯಾರಿಗಾದರೂ ಬಂದಿದೆಯೇ? ಆದರೂ ಜನ ಮಾತ್ರ ಮೋದಿ, ಮೋದಿ ಎನ್ನುತ್ತಾರೆ. ಅಲ್ಲದೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು, ಎಲ್ಲಿ ಮಾಡಿದ್ದಾರೆ? ಇಂದು ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾರ್ಖಾನೆ ಮುಚ್ಚುತ್ತಿವೆ. ಕೊರೊನಾ ಬಂದಾಗಿನಿಂದ ನೇಕಾರಿಕೆ ನೆಲಕಚ್ಚಿದೆ. ನರೇಂದ್ರ ಮೋದಿಯಂತಹ ಸುಳ್ಳುಗಾರ ಸ್ವಾತಂತ್ರ ಭಾರತದಲ್ಲಿ ಇಲ್ಲಿಯವರೆಗೂ ಯಾರೂ ಬಂದಿಲ್ಲ ಎಂದರು.
ಇಂದು ನೇಕಾರರು ಮಾಡಿರುವ ಮನವಿ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುತ್ತೇನೆ. ಪಾದಯಾತ್ರೆ ಮಾಡಬೇಕು ಅಂದುಕೊಂಡಿದ್ದೀರಲ್ಲಾ ಅದನ್ನು ಮಾಡಿ, ಸರ್ಕಾರಕ್ಕೆ ಒತ್ತಡ ತರದಿದ್ದರೆ ಏನೂ ಕೆಲಸ ಆಗಲ್ಲ. ನಿಮ್ಮ ಪಾದಯಾತ್ರೆಯ ಕೊನೆ ದಿನ ನನಗೂ ಹೇಳಿ ನಾನು ಬರುತ್ತೇನೆ ಎಂದರು.