ಆನೇಕಲ್: ನಿನ್ನೆ ರಾತ್ರಿ ಹೆಬ್ಬಗೋಡಿಯಲ್ಲಿ ಜಾರ್ಖಂಡ್ ಮೂಲದ 14 ಮಂದಿ ವಲಸೆ ಕಾರ್ಮಿಕರು ಬೀದಿಗೆ ಬಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಖುದ್ದು ತೆರಳಿ ತಕ್ಷಣ ಸ್ಪಂದಿಸಿದ್ದಾರೆ.
ಹೆಬ್ಬಗೋಡಿ ಮೇಲ್ಸೇತುವೆ ಕೆಳಗಡೆ ನಿಂತು ತಮ್ಮ ಜಾರ್ಖಂಡ್ ಸರ್ಕಾರಕ್ಕೆ ಮನವಿ ಮಾಡಿಕೊಂಡ ಕಾರ್ಮಿಕರ ಅಳಲಿಗೆ ಅಲ್ಲಿನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕರ್ನಾಟಕ ಸರ್ಕಾರದ ಗಮನ ಸೆಳೆದಿದ್ದರು. ಕೂಡಲೇ ಎಚ್ಚೆತ್ತ ಮುಖ್ಯಮಂತ್ರಿಗಳ ಕಚೇರಿ, ಸಂಸದೆ ಶೋಭಾ ಕರಂದ್ಲಾಜೆ ಮೂಲಕ ವಲಸೆ ಕಾರ್ಮಿಕರ ಮನವಿಗೆ ಸ್ಪಂದಿಸುವಂತೆ ಮಾಡಿದೆ. ಹೆಬ್ಬಗೋಡಿ ಠಾಣೆ ಬಳಿಗೆ ಬಂದ ಸಂಸದೆ, ನಿರಾಶ್ರಿತರನ್ನು ಬಾಡಿಗೆ ಮನೆಯಿಂದ ಮಾಲೀಕ ಹೊರಗಟ್ಟಿ ಹಿಂಸಿಸಿದ್ದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಕಳೆದ ಮೂರು ತಿಂಗಳಿಂದ ಬಾಡಿಗೆ ನೀಡಿಲ್ಲವೆಂದು ಮನೆ ಮಾಲೀಕರು ವಲಸೆ ಕಾರ್ಮಿಕರನ್ನು ಬೀದಿಗೆ ತಳ್ಳಿದ್ದರಂತೆ. ಹೀಗಾಗಿ ಹೆಬ್ಬಗೋಡಿ ಮೇಲ್ಸೇತುವೆ ಕೆಳಗಡೆ ನಿಂತು ವಿಡಿಯೋ ಮಾಡಿ ತಮ್ಮನ್ನು ಜಾರ್ಖಂಡ್ಗೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದರು.
ಇದೀಗ ಇದಕ್ಕೆ ಸ್ಪಂದಿಸಿ ದೊಡ್ಡ ನಾಗಮಂಗಲದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕವಾಗಿ ತಂಗುವುದಕ್ಕೆ ಕಾರ್ಮಿಕ ಇಲಾಖೆ ಹಾಗೂ ಕಂದಾಯ ಇಲಾಖೆಯ ನೆರವಿನಿಂದ ವ್ಯವಸ್ಥೆ ಮಾಡಿ ವಲಸೆ ಕಾರ್ಮಿಕರನ್ನು ಸಂತೈಸಿ ಸಂಸದೆ ಹೊರಟಿದ್ದಾರೆ.