ದೊಡ್ಡಬಳ್ಳಾಪುರ(ಬೆಂಗಳೂರು): ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ಬುಧವಾರ ರಾತ್ರಿ 2 ಗಂಟೆಯ ವೇಳೆಗೆ ಖದೀಮರು ಸುಮಾರು 1 ಲಕ್ಷ ಮೌಲ್ಯದ 11 ಕುರಿಗಳನ್ನು ವಾಹನದಲ್ಲಿ ಸಾಗಿಸಿದ್ದಾರೆ. ಗ್ರಾಮದ ಓಬಳೇಶ್ ಕುಟುಂಬ ಕುರಿ ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ರಸ್ತೆ ಪಕ್ಕದಲ್ಲಿಯೇ ಕೊಟ್ಟಿಗೆ ನಿರ್ಮಿಸಿದ್ದರು. ಮನೆಯ ಯಜಮಾನ ಓಬಳೇಶ್ ಪ್ರವಾಸಕ್ಕೆ ತೆರಳಿದ್ದಾರೆ. ಇದೇ ಸಮಯದಲ್ಲಿ ಕಳ್ಳತನ ನಡೆದಿದೆ.
ರಾತ್ರಿ ಕ್ವಾಲಿಸ್ ವಾಹನದಲ್ಲಿ ಬಂದಿದ್ದ ನಾಲ್ವರು ಕಳ್ಳರು ಕೊಟ್ಟಿಗೆಯಲ್ಲಿದ್ದ ಕುರಿಗಳನ್ನು ವಾಹನಕ್ಕೆ ತುಂಬಿದ್ದಾರೆ. ಕುರಿಗಳ ಶಬ್ದ ಕೇಳಿ ಎಚ್ಚರಗೊಂಡ ಓಬಳೇಶ್ ಪತ್ನಿ ಸುಮಾ ಮನೆಯಿಂದ ಹೊರಬಂದು ನೋಡಿದ್ದಾರೆ. ಅಷ್ಟರಲ್ಲಾಗಲೇ ಕುರಿಗಳನ್ನು ವಾಹನಕ್ಕೆ ತುಂಬಿದ್ದರು. ಕೊಟ್ಟಿಗೆಯಲ್ಲಿದ್ದ ಮತ್ತೆರಡು ಕುರಿಗಳನ್ನೂ ಸಹ ಕದಿಯಲು ಪ್ರಯತ್ನಿಸಿದ್ದು ಮಹಿಳೆಯನ್ನು ಕಂಡು ಕಳ್ಳರು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಎದುರಾಳಿ ಪಂಚ್ಗೆ ಕುಸಿದು ಬಿದ್ದು ಮೈಸೂರಿನ ಬಾಕ್ಸರ್ ಸಾವು.. ಕಿಕ್ ಬಾಕ್ಸಿಂಗ್ ವೇಳೆ ದುರ್ಘಟನೆ
ಕಳ್ಳರು ಪರಾರಿಯಾಗಿರುವ ದೃಶ್ಯ ಗ್ರಾಮದ ಸಿಸಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.