ನೆಲಮಂಗಲ: ಕೆ.ಎಸ್.ಆರ್.ಟಿ.ಸಿ ಬಸ್, ಇನ್ನೋವಾ ಕಾರ್ ಮತ್ತು ಕ್ಯಾಂಟರ್ ನಡುವೆ ಸರಣಿ ಅಪಘಾತವಾಗಿದೆ. ಇನ್ನೋವಾ ಕಾರು ತುಮಕೂರಿನ ಮಾಜಿ ಸಚಿವ ಸೊಗಡು ಶಿವಣ್ಣರಿಗೆ ಸೇರಿದ ಕಾರು ಎನ್ನಲಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇನ್ನು ಮಾಜಿ ಸಚಿವ ಸೊಗಡು ಶಿವಣ್ಣ ಸಂಬಂಧಿಕರು ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಂತೆ. ಅಪಘಾತದ ನಂತರ ಕಾರಿನಲ್ಲಿದ್ದ ಶಿವಣ್ಣರ ಸಂಬಂಧಿಕರು ಕಾರಿನಿಂದ ಇಳಿದು ಹೋಗಿದ್ದಾರೆ ಎನ್ನಲಾಗಿದೆ.
ಸರಣಿ ಅಪಘಾತದಿಂದ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿಬಂದಿದೆ. ಇದೇ ವೇಳೆ ಹೆದ್ದಾರಿ ನಾಲ್ಕರಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಹೆಚ್ಚಾಗಿರುವ ಕುರಿತು ಹಾಗೂ ಜಾಸ್ ಟೋಲ್ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.