ಬೆಂಗಳೂರು: ಖಾಸಗಿ ವಿಲ್ಲಾವೊಂದರಲ್ಲಿ ಮನೆಗೆಲಸ ಮಾಡಿಕೊಂಡು ವಾಸವಿದ್ದ ದಂಪತಿ ಮೇಲೆ ಅದೇ ವಿಲ್ಲಾದ ಸೆಕ್ಯೂರಿಟಿ ಗಾರ್ಡ್ಗಳು ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಮಿಳುನಾಡು ಮೂಲದವರಾದ ರತ್ಮಮ್ಮ ಮತ್ತು ಪತಿ ಕಿಶೋರ್ ಲಾಲ್ ನೆರೆ ರಾಜ್ಯದಿಂದ ಬಂದು, ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನ ವೈಟ್ ಫೀಲ್ಡ್ನಲ್ಲಿರುವ ಜತ್ತಿ ದ್ವಾರಕಾಮಯಿ ವಿಲ್ಲಾದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಜುಲೈ 23ರಂದು ಸಂಜೆ ನಾಲ್ಕು ಗಂಟೆಗೆ ವಿಲ್ಲಾದ ಬಳಿ ಬಂದಾಗ ಸೆಕ್ಯೂರಿಟಿ ಗಾರ್ಡ್ಗಳು ಇಲ್ಲದ ಕಾರಣ ಇವರೆ ಗೇಟ್ ತೆರೆದು ಒಳಗೆ ಪ್ರವೇಶಿಸಿದ್ದಾರೆಂದು ಸೆಕ್ಯೂರಿಟಿ ಗಾರ್ಡ್ಗಳು ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಕಾಲಿನ ಮೂಳೆ ಮುರಿದುಕೊಂಡಿರುವ ರತ್ನಮ್ಮ ಪತಿ ಕಿಶೋರ್ ವೈಟ್ ಫೀಲ್ಡ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜತ್ತಿ ದ್ವಾರಕಾಮಯಿ ವಿಲ್ಲಾದಲ್ಲಿ ಮಾಜಿ ಉಪ ರಾಷ್ಟ್ರಪತಿ ಜತ್ತಿ ಡಿ.ಬಿ.ಜತ್ತಿ ಕುಟುಂಬದವರು ವಾಸಿಸುತ್ತಿದ್ದರಂತೆ. ಆಗ ಕೀಳು ಜಾತಿ ಎಂಬ ಕಾರಣಕ್ಕೆ ಇವರನ್ನು ಕೆಲದಿಂದ ತೆಗೆದು ಹಾಕಿದ್ದರಂತೆ.
ಇನ್ನು ಈ ಆರೋಪದ ಬಗ್ಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಿ ಜತ್ತಿ, ಜಾತಿ ನಿಂದನೆ ಎಂಬುದು ಸುಳ್ಳು ಆರೋಪವಾಗಿದ್ದು, ನಮ್ಮ ಡಿ.ಬಿ.ಜತ್ತಿ ದ್ವಾರಕಾಮಯಿ ವಿಲ್ಲಾಗಳಲ್ಲಿ ಪ್ರತ್ಯೇಕ ಸೆಕ್ಯೂರಿಟಿಗಳಿದ್ದಾರೆ. ಹಾಗಾಗಿ ಸೆಕ್ಯೂರಿಟಿ ಗಾರ್ಡ್ಗಳ ಮಧ್ಯೆ ಜಗಳವಾಗಿದ್ದು, ನಮ್ಮ ಗಾರ್ಡ್ಗಳಿಗೆ ಹೊಡೆದದ್ದಲ್ಲದೆ ವಿನಾಕಾರಣ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಸಹ ದೂರು ನೀಡಿದ್ದೇವೆ ಎಂದಿದ್ದಾರೆ.
ಇದೀಗ ಆ ದಂಪತಿ ಪ್ರಭಾಕರ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಇವರ ಮನೆಯಿಂದಲೂ ಕೆಲಸ ಬಿಟ್ಟು ಬೇರೆಡೆ ತೆರಳುವಂತೆ ಎರಡು ಮೂರು ಬಾರಿ ಬೆದರಿಕೆ ಹಾಕಿ, ಸೆಕ್ಯೂರಿಟಿ ಗಾರ್ಡ್ಗಳಿಂದ ಆ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಭಾಕರ್ ಆರೋಪಿಸಿದ್ದಾರೆ.