ಬೆಂಗಳೂರು: ಇಡೀ ಸಿಲಿಕಾನ್ ಸಿಟಿಯ ಅರ್ಧಕ್ಕೂ ಹೆಚ್ಚು ತ್ಯಾಜ್ಯ ನಗರದ ಹೊರವಲಯಗಳ ಕಲ್ಲು ಕ್ವಾರಿಗೆ ತೆಗೆದುಕೊಂಡು ಹೋಗಿ ಸುರಿಯಲಾಗುತ್ತೆ. ಬೆಳ್ಳಳ್ಳಿ ಕ್ವಾರಿ ಈಗಾಗಲೇ ಭರ್ತಿಯಾಗಿದೆ. ಆದರೆ, ಈವರೆಗೆ ತ್ಯಾಜ್ಯದ ವಾಸನೆ, ಪರಿಸರ ಮಾಲಿನ್ಯದಿಂದ ತೊಂದರೆ ಅನುಭವಿಸಿದ್ದ ಬೆಳ್ಳಳ್ಳಿ ಜನರಿಗೆ ಉಚಿತವಾಗಿ ಅದೇ ಕಸದಿಂದ ಉತ್ಪತ್ತಿಯಾದ ಗ್ಯಾಸ್ ವಿತರಿಸಲು ಪಾಲಿಕೆ ಚಿಂತನೆ ನಡೆಸಿದೆ.
ಈ ಯೋಜನೆ ಯಶಸ್ವಿಯಾದರೆ ಸುಮಾರು ಏಳು ವರ್ಷಗಳ ಕಾಲ ಐದು ಸಾವಿರ ಕುಟುಂಬಗಳು ಒಲೆ ಉರಿಸಲು ಪ್ರಯೋಜನ ಪಡೆಯಲಿವೆ ಎಂದು ಘನತ್ಯಾಜ್ಯ ಜಂಟಿ ಆಯುಕ್ತ ಸರ್ಫರಾಜ್ ಖಾನ್ ತಿಳಿಸಿದರು. ಬೆಳ್ಳಳ್ಳಿ ತ್ಯಾಜ್ಯ ಭೂಭರ್ತಿ ಘಟಕದ ಸುತ್ತಮುತ್ತ ಮಿಟಗಾನಹಳ್ಳಿ, ಹೊಸೂರು ಬಂಡೆ, ಕಾಡು ಸೊಣ್ಣಪ್ಪನಹಳ್ಳಿ ಗ್ರಾಮಗಳಿವೆ. ಕಸ ಕ್ವಾರಿಯಿಂದ ಹೊರಬರುತ್ತಿದ್ದ ದುರ್ವಾಸನೆ, ಸೊಳ್ಳೆ, ಕಲುಷಿತ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದರು.
ಕಸದಿಂದ ಮಿಥೇನ್ ಅನಿಲ ಉತ್ಪತ್ತಿಯಾಗುತ್ತಿದ್ದು ಸದ್ಯ ಘಟಕದಲ್ಲೇ ಬಳಸಲ್ಪಡುತ್ತಿದೆ. ಮುಂದೆ ಹೆಚ್ಚುವರಿ ಮಿಥೇನ್ ಅನಿಲ ಸಿಗುವುದರಿಂದ ಕಡಿಮೆ ವೆಚ್ಚದಲ್ಲಿ ಅನಿಲ ಪೂರೈಕೆ ಮಾಡಬಹುದು ಎಂಬುದು ಪಾಲಿಕೆಯ ಯೋಜನೆ. ಈ ವಿಚಾರ ಈಗಾಗಲೇ ಚರ್ಚೆಯಲ್ಲಿದ್ದು, ಪೈಪ್‌ಲೈನ್ ಮೂಲಕ ಅನಿಲ ಪೂರೈಕೆ ಮಾಡುವುದೋ ಅಥವಾ ಸಿಲಿಂಡರ್ಗಳ ಮೂಲಕವೋ ಎಂಬುದು ಚರ್ಚೆ ನಡೆಯುತ್ತಿದೆ.
ಕೆಲವೇ ದಿನಗಳಲ್ಲಿ ಬೆಳ್ಳಳ್ಳಿ ಕ್ವಾರಿ ಭರ್ತಿಯಾಗಲಿದ್ದು, ಬಳಿಕ ಮಣ್ಣಿನ ಹೊದಿಕೆ ಹಾಕಲಾಗುವುದು. ಮಿಥೇನ್ ಅನಿಲ ಸಂಗ್ರಹಿಸಿ ಗ್ರಾಮಗಳಿಗೆ ಪೂರೈಸಲಾಗುವುದು ಎಂದು ಸರ್ಫರಾಜ್ ಖಾನ್ ತಿಳಿಸಿದರು.