ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ವಸತಿ ಶಾಲೆಯ ವಿದ್ಯಾರ್ಥಿಗಳು ಕಾಲುವೆಯಲ್ಲಿ ಈಜಲು ಹೋದ ಸಮಯದಲ್ಲಿ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಇನ್ನುಳಿದ ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ. ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿ ಬಳಿ ಘಟನೆ ನಡೆದಿದೆ.
ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಜುನೇದ್ ಪಾಷ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಮತ್ತಿಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಸತಿ ಶಾಲೆಯ ಎಲ್ಲ ಶಿಕ್ಷಕರು ಮತ್ತು ಕೆಲವು ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಿದ್ದಾರೆ. ಶಾಲೆಯಲ್ಲಿ 15 ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳದೇ ವಸತಿ ಶಾಲೆಯಲ್ಲೇ ಉಳಿದುಕೊಂಡಿದ್ದರು.
ವಸತಿ ಶಾಲೆಯಲ್ಲಿದ್ದ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಒಬ್ಬ ಹುಡುಗನನ್ನು ನೇಮಿಸಲಾಗಿತ್ತು. ಇದೇ ಹುಡುಗ ಶಾಲೆಯ ಬಳಿ ಇದ್ದ ಕಾಲುವೆಯಲ್ಲಿ ಮಕ್ಕಳನ್ನು ಈಜಲು ಕರೆದುಕೊಂಡು ಹೋಗಿದ್ದಾನೆ. ಘಟನೆಯ ನಂತರ ವಿದ್ಯಾರ್ಥಿಗಳ ಪೋಷಕರು ವಸತಿ ಶಾಲೆಗೆ ದೌಡಾಯಿಸಿ, ಶಿಕ್ಷಕರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಜೂಜು ಗೀಳು: ಸಾಲದ ಹೊರೆಗೆ ಹೆದರಿ ಯುವಕ ಆತ್ಮಹತ್ಯೆ