ನೆಲಮಂಗಲ: ನಗರದ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ ಬಳಸಿದ ನಂತರ ಹಣ ನೀಡದೆ ಬರುತ್ತಿದ್ದಾಗ, ಹಣದ ವಿಚಾರಕ್ಕೆ ಶೌಚಾಲಯ ಸಿಬ್ಬಂದಿ ಮತ್ತು ಚಾಲಕನ ನಡುವೆ ಜಗಳವಾಗಿ, ಶೌಚಾಲಯ ಸಿಬ್ಬಂದಿ ಚಾಲಕನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾನೆ.
ನೆಲಮಂಗಲ ನಗರದ ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕುಣಿಗಲ್ ನಿಂದ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ನೆಲಮಂಗಲ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿತ್ತು. ಈ ಸಮಯದಲ್ಲಿ ಬಸ್ ಚಾಲಕ ವೆಂಕಟೇಶ್ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಮೂತ್ರ ವಿಸರ್ಜಿಸಲು ಹೋಗಿದ್ದಾನೆ, ಮೂತ್ರ ವಿಸರ್ಜಿಸಿದ ಬಳಿಕ ಹಣ ನೀಡದೆ ಹಾಗೆ ವಾಪಸ್ ಬರಲು ಯತ್ನಿಸಿದ್ದಾನೆ, ಆಗ ಸಾರ್ವಜನಿಕ ಶೌಚಾಲಯ ನಿರ್ವಹಣೆ ಮಾಡುತ್ತಿದ್ದ ರಾಜೇಶ್ ಹಣ ನೀಡುವಂತೆ ಕೇಳಿದ್ದು, ಆಗ ವೆಂಕಟೇಶ್ ನಾನು ಸರ್ಕಾರಿ ಬಸ್ ಡ್ರೈವರ್ ಹಣ ನೀಡುವುದಿಲ್ಲ ಎಂದು ಉತ್ತರಿಸಿದ್ದಾನೆ.
ಆಗ ರಾಜೇಶ್ ಬೈದು ನೀವು ಹಣ ಕೊಟ್ಟು ಹೋಗಬೇಕು ಎಂದಿದ್ದಾನೆ ಆಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಿಷಯ ತಾರಕಕ್ಕೇರಿ ಗಂಭೀರ ಸ್ವರೂಪ ಪಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ರಾಜೇಶ್ ಕಬ್ಬಿಣದ ರಾಡ್ ನಿಂದ ವೆಂಕಟೇಶ್ ಮೇಲೆ ಹಲ್ಲೆ ನೆಡೆಸಿದ್ದಾನೆ.
ಗಂಭೀರ ಗಾಯಗೊಂಡಿರುವ ಬಸ್ ಚಾಲಕ ವೆಂಕಟೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಹಲ್ಲೆ ನಡೆಸಿದ ರಾಜೇಶ್ ನೆಲಮಂಗಲ ನಗರ ಪೊಲೀಸರು ಬಂಧಿಸಿದ್ದು, ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.