ಆನೇಕಲ್: ರಾಜ್ಯದ ಎಲ್ಲಾ ಸರ್ಕಾರಿ ಪದವಿ ವಿದ್ಯಾರ್ಥಿಗಳಿಗೆ ವಿಳಂಬ ಮಾಡದೇ ಉಚಿತ ಲ್ಯಾಪ್ ಟಾಪ್ ವಿತರಿಸಬೇಕೆಂದು ಒತ್ತಾಯಿಸಿ ಆನೇಕಲ್ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಲ್ಯಾಪ್ ಟಾಪ್ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಶೈಕ್ಷಣಿಕ ಯೋಜನೆಯ ಅಡಿಯಲ್ಲಿ ಬರುವ ಸರ್ಕಾರದ ಉಚಿತ ಲ್ಯಾಪ್ ಯೋಜನೆಯ ಫಲ ಕೇವಲ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ದೊರೆಯುವಂತಾಗಿದೆ. ಅಲ್ಲಿಯೂ ಪ್ರಥಮ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೆ ದೊರೆತಿಲ್ಲ. ಈ ಯೋಜನೆಯು ಸರ್ಕಾರಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಒಳಗೊಳ್ಳಬೇಕಿತ್ತು. ಕೆಲವು ವಿದ್ಯಾರ್ಥಿಗಳಿಗೆ ನೀಡಿ ಬಹುಪಾಲು ವಿದ್ಯಾರ್ಥಿಗಳನ್ನು ಇದರಿಂದ ವಂಚಿಸುವುದು ತಾರತಮ್ಯ ನೀತಿಯಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಕೂಡಲೇ ವಿಳಂಬ ಮಾಡದೇ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಬೇಕು. ಜೊತೆಗೆ, ಮುಂದಿನ ವರ್ಷವೂ ಈ ಯೋಜನೆಯನ್ನು ಮುಂದುವರೆಸಲು ಬಜೆಟ್ ನಲ್ಲಿ ವಿಶೇಷ ಅನುದಾನ ಖಾತ್ರಿಪಡಿಸಬೇಕು ಎಂದರು.