ಬೆಂಗಳೂರು: ನ್ಯಾಯಯುತ ವೇತನ ಪರಿಷ್ಕರಣೆ ಹಾಗೂ ಅದರಿಂದ ಬರಬೇಕಾದ ಬಾಕಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಅಖಿಲ ಭಾರತ ಹೆಚ್ಎಎಲ್ ಟ್ರೇಡ್ ಸಮನ್ವಯ ಸಮಿತಿ ಕರೆಯ ಮೇರೆಗೆ ಹೆಚ್ಎಎಲ್ ವರ್ಕರ್ ಯೂನಿಯನ್ ಪ್ರತಿಭಟನೆ ನಡೆಸಿತು.
ಹೆಚ್‌ಎಎಲ್ ಆಡಳಿತ ಮಂಡಳಿ ನೌಕರರ ವೇತನ ಪರಿಷ್ಕರಣೆ ಸಮಸ್ಯೆ ಪರಿಹರಿಸುವ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದೆಯಂದು ನೂರಾರು ಕಾರ್ಮಿಕರು ಆಡಳಿತ ಮಂಡಳಿಯ ವಿರುದ್ಧ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಯೂನಿಯನ್ ಜತೆ ಆರು ಸುತ್ತು ಮಾತುಕತೆ ನಡೆಸಲಾಗಿದೆ. ವೇತನ ಪರಿಷ್ಕರಣೆ ಮಾಡಿದ್ದರೂ ಸಹ ಅದು ನ್ಯಾಯಯುತವಾಗಿಲ್ಲ. ತಾರತಮ್ಯ ನೀತಿ ಅನುಸರಿಸಲಾಗಿದೆಯಲ್ಲದೆ, ಬಾಕಿ ಮೊತ್ತವನ್ನೂ ಬಿಡುಗಡೆ ಮಾಡಿಲ್ಲವೆಂದು ಕಾರ್ಮಿಕರು ದೂರಿದರು.
ದೊಡ್ಡ ದೊಡ್ಡ ಅಧಿಕಾರಿಗಳು ಮಾತ್ರ ವೇತನ ಪರಿಷ್ಕರಣೆ ಮಾಡಿಕೊಂಡು ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ವೇತನ ಹೆಚ್ಚಿಸದೇ ಅನ್ಯಾಯ ಮಾಡುತ್ತಿದ್ದಾರೆ. ಆದ್ದರಿಂದ ನಾವು ಹೆಚ್ಎಎಲ್ ನ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.