ನೆಲಮಂಗಲ (ಬೆಂಗಳೂರು ಗ್ರಾಮಾಂತರ) : ಕಳೆದ 30 ವರ್ಷಗಳಿಂದ ಗ್ರಾಮದಲ್ಲಿದ್ದ ನ್ಯಾಯಬೆಲೆ ಅಂಗಡಿಯನ್ನು ಯಾವುದೇ ನೋಟಿಸ್ ನೀಡದೇ ಏಕಾಏಕಿ ಸ್ಥಳಾಂತರ ಮಾಡಿರುವುದನ್ನು ಖಂಡಿಸಿ ಬೈರನಾಯ್ಕನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಆಡಳಿತ ಪಕ್ಷದ ಪ್ರಭಾವದಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಬೈರನಾಯ್ಕನಹಳ್ಳಿ ಗ್ರಾಮದಲ್ಲಿದ್ದ ನ್ಯಾಯಬೆಲೆ ಅಂಗಡಿಯನ್ನು ಹಸಿರುವಳ್ಳಿಗೆ ಸ್ಥಳಾಂತರ ಮಾಡಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಬೈರನಾಯ್ಕನಹಳ್ಳಿ ಸೇರಿದಂತೆ ಹಸಿರುವಳ್ಳಿ, ಲಕ್ಕಪ್ಪನಹಳ್ಳಿ, ದೊಡ್ಡ ಹುಚ್ಚಯ್ಯನಪಾಳ್ಯ ಗ್ರಾಮದ 700ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿದ್ದು, ಕಳೆದ 30 ವರ್ಷದಿಂದ ಭಾಗವಾಗಿರುವುದರಿಂದ ಬೈರನಾಯ್ಕನಹಳ್ಳಿಯಲ್ಲಿ ಪಡಿತರ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಆದರೆ, ಕಳೆದ ಕೆಲ ತಿಂಗಳ ಹಿಂದೆ ಏಕಾಏಕಿ ಯಾವುದೇ ಸೂಚನೆ, ಆದೇಶ ನೀಡದೆ ನ್ಯಾಯ ಬೆಲೆ ಅಂಗಡಿಯನ್ನು ಹಸಿರುವಳ್ಳಿಯಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆದಿದ್ದಾರೆ. ಹಸಿರುವಳ್ಳಿ ಗ್ರಾಮ ಇಲ್ಲಿಂದ 5 ಕಿಮೀ ದೂರ ವಿದ್ದು, ಸರಿಯಾ ಸಾರಿಗೆ ವ್ಯವಸ್ಥೆ ಇಲ್ಲ. ಈ ನಡುವೆ ಕೇವಲ ಮೂರು ಮಾತ್ರ ಪಡಿತರ ವಿತರಣೆ ಮಾಡುವುದು ಎನ್ನುತ್ತಾರೆ. ಇಂತಹ ಸಂದರ್ಭದಲ್ಲಿ ಹೇಗೆ ಅಕ್ಕಿ ತೆಗೆದುಕೊಂಡು ಬರುವುದು. ಯಾವುದೇ ರಾಜಕೀಯ ಲೇಪ ನ್ಯಾಯಬೆಲೆ ಅಂಗಡಿಗೆ ಬಳಿಯಬಾರದು. ಬೈರನಾಯ್ಕನಹಳ್ಳಿಯಲ್ಲಿ ನ್ಯಾಯಬೆಲೆ ಅಂಗಡಿ ಮುಂದುವರೆಯಲಿ ಎಂದು ಗ್ರಾ.ಪಂ ಸದಸ್ಯ ಸಿ.ರಾಜಣ್ಣ ಹೇಳಿದರು.
ಸುಮಾರು ವರ್ಷಗಳಿಂದ ಬೈರನಾಯ್ಕನಹಳ್ಳಿಯಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಸರ್ಮಪಕವಾಗಿ ಪಡಿತರ ಅಕ್ಕಿಯ ವಿತರಣೆ ಆಗುತ್ತಿತ್ತು. ಅಕ್ಕ-ಪಕ್ಕದ ಗ್ರಾಮದವರು ಬಂದು ತೆಗೆದುಕೊಂಡು ಹೋಗುತ್ತಿದ್ದರು. ಆದರೇ, ಇದೀಗ ರಾಜಕೀಯ ದೃಷ್ಟಿಯಿಂದ ಅವರಿಗೆ ಬೇಕಾದ ಸ್ಥಳಕ್ಕೆ ನ್ಯಾಯಬೆಲೆ ಅಂಗಡಿಯನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ನಾವು ನಿತ್ಯ ಕೂಲಿ ಕೆಲಸಕ್ಕೆ ಹೋಗುತ್ತಿರುವುದರಿಂದ ಹಸಿರುವಳ್ಳಿಗೆ ಹೋಗಿ ಅಕ್ಕಿ ತೆಗೆದುಕೊಂಡು ಬರುವುದಕ್ಕೆ ಆಗುತ್ತಿಲ್ಲ. ಗ್ರಾಮದಲ್ಲಿ ಮಹಿಳೆಯರು, ವಯಸ್ಸಾದವರು ಇದ್ದಾರೆ. ಹೀಗಾಗಿ ಮೊದಲಿನಂತೆ ನಮ್ಮ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ ತೆರೆಯಬೇಕು ಎಂದು ಗ್ರಾಮಸ್ಥರಾದ ಗಂಗಯ್ಯ ಒತ್ತಾಯಿಸಿದರು.
ನ್ಯಾಯಬೆಲೆ ಅಂಗಡಿಯನ್ನು 5 ಕಿಮೀ ದೂರಕ್ಕೆ ಏಕೆ ಹಾಕಿದ್ದೀರಾ? ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಕೊಡಿ ಎಂದು ತಹಸೀಲ್ದಾರ್ ಅವರನ್ನು ಕೇಳಿದ್ದೇವೆ. ಆದರೇ ತಹಸೀಲ್ದಾರ್ ಅವರು ರಾಜಕೀಯ ನಾಯಕರ ಒತ್ತಡ ಎನ್ನುತ್ತಿದ್ದಾರೆ. ಆದ್ಧರಿಂದ ಜಿಲ್ಲಾಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸಿ ನಮಗೆ ನ್ಯಾಯಕೊಡಿ ಎಂದು ನ್ಯಾಯಬೆಲೆ ಅಂಗಡಿಯಿಂದ ವಂಚಿತರಾದ ಆನಂದ್ ಮನವಿ ಮಾಡಿದರು.
ಇದನ್ನೂ ಓದಿ : ರೈತರಿಗೆ ಸೂಕ್ತ ಸಮಯದಲ್ಲಿ ಬರ ಪರಿಹಾರ ಸಿಗದಿದ್ದರೆ ಜಿಲ್ಲಾಧಿಕಾರಿಗಳೇ ಹೊಣೆ: ಸಚಿವ ಕೃಷ್ಣ ಬೈರೇಗೌಡ