ಹೊಸಕೋಟೆ: ಇಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಅಭಿವೃದ್ಧಿಗೆ ಒತ್ತು ನೀಡುವಂತೆ ಸಚಿವ ಹಾಗೂ ಶಾಸಕರಲ್ಲಿ ನಗರಸಭೆ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಶಾಸಕರನ್ನು ಕರೆಯದೆ ನಗರಸಭೆ ಅಧ್ಯಕ್ಷರು ಮತ್ತು ಸಿಬ್ಬಂದಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಬಂದಿದೆ. ಈ ಬಗ್ಗೆ ನಗರಸಭೆ ಅಧ್ಯಕ್ಷ ಅರುಣ್ ಕುಮಾರ್ ಅವರನ್ನು ಕೇಳಿದರೆ, ನಾವು ಸಚಿವರು ಸೇರಿದಂತೆ ಶಾಸಕರ ಮನೆಗೂ ಅಧಿಕಾರಿಗಳನ್ನು ಕಳಿಸಿ ಆಹ್ವಾನ ನೀಡಿ ಬಂದಿದ್ದೆವು. ಆದರೆ ಶಾಸಕ ಶರತ್ ಬಚ್ಚೇಗೌಡ ರಾಜಕೀಯ ದುರುದ್ದೇಶದಿಂದ ಈ ರೀತಿ ಬೆಂಬಲಿಗರನ್ನು ಕಳಿಸಿ ಗೂಂಡಾವರ್ತನೆ ಮಾಡಿದ್ದಾರೆ ಎಂದು ದೂರಿದರು.
ನಗರವನ್ನು ಅಭಿವೃದ್ಧಿ ಮಾಡುವುದು ಬಿಟ್ಟು ಶಿಷ್ಟಾಚಾರ ಉಲ್ಲಂಘನೆ ಅಂತಿದ್ದಾರೆ. ಬೇರೆ ಕಡೆ ಇವರು ಮಾಡುವುದು ಏನು ಅಂತ ಶಾಸಕರ ವಿರುದ್ಧ ಆಸಮಾಧಾನ ಹೊರಹಾಕಿದರು. ನಗರ ಹಿಂದುಳಿದ ಕಾರಣ ನಗರವನ್ನು ಮಾದರಿಯಾಗಿ ಮಾಡಬೇಕೆಂಬ ಉದ್ದೇಶದಿಂದ ಶಾಸಕರನ್ನು ಪೂಜೆಗೆ ಆಹ್ವಾನ ನೀಡಲಾಗಿತ್ತು. ಆದರೆ ತಮ್ಮ ಅನುಮತಿಯನ್ನು ಪಡೆಯದೆ ಪೂಜೆಯನ್ನು ಇಟ್ಟುಕೊಂಡಿರುವುದರಿಂದ ಕುಪಿತರಾಗಿ ತಮ್ಮ ಬೆಂಬಲಿಗರನ್ನು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಎಂಟಿಬಿ ನಾಗರಾಜ್ ಅವರು ಸಚಿವರಾಗಿ 2 ವಾರ ಆಗಿದೆ. ಪಂಚಾಯಿತಿಗಳಲ್ಲಿ ಶಾಸಕರು ಕಳೆದ 15 ದಿನಗಳಿಂದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ಆದರೆ ಒಂದು ದಿನ ಕೂಡ ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಇದು ಮಾತ್ರ ಅವರಿಗೆ ಶಿಷ್ಟಾಚಾರವೇ ಎಂದು ಪ್ರಶ್ನೆ ಮಾಡಿದರು.
ಎಂಟಿಬಿ ನಾಗರಾಜ್ ಕಳೆದ ವರ್ಷ ಹೊಸಕೋಟೆ ಅಭಿವೃದ್ಧಿಗೆ ನೂರು ಕೋಟಿಗೂ ಹೆಚ್ಚು ಅನುದಾನವನ್ನು ತಂದಿದ್ದರು. ಕಳೆದ ಇಪ್ಪತ್ತು ವರ್ಷಗಳಿಂದ ಹೊಸಕೋಟೆಯಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರು ಹಲವು ಗಲಾಟೆಗಳನ್ನು ಮಾಡಿಕೊಂಡು ನೂರಾರು ಜನರಿಗೆ ತೊಂದರೆ ಆಗಿದೆ.
ಆದರೆ ಶರತ್ ಬಚ್ಚೇಗೌಡರು ಬಂದ ಮೇಲೆ ಇದಕ್ಕೆಲ್ಲ ಅಂತ್ಯವಾಗುತ್ತದೆ ಎಂದುಕೊಂಡಿದ್ದೆವು. ಆದರೆ ಮತ್ತೆ ಅದನ್ನೇ ಮುಂದುವರೆಸುತ್ತಿದ್ದಾರೆ. ಆದರಿಂದ ಶಾಸಕರಲ್ಲಿ ಮನವಿ ಮಾಡುತ್ತೇನೆ. ಹೊಸಕೋಟೆಯಲ್ಲಿ ಶಾಂತಿ ಕಾಪಾಡಿ ಮತ್ತು ತಾಲೂಕಿನಲ್ಲಿ ಸಚಿವರು ಹಾಗೂ ಶಾಸಕರು ಗಲಭೆಗಳು ಬಿಟ್ಟು ಅಭಿವೃದ್ಧಿಗೆ ಗಮನ ನೀಡಬೇಕು ಎಂದು ಮನವಿ ಮಾಡಿದರು.