ದೇವನಹಳ್ಳಿ: ರಾಜ್ಯದಲ್ಲಿ ಡಿ. 22 ಮತ್ತು 27ರಂದು ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 102 ಗ್ರಾಮ ಪಂಚಾಯತ್ಗಳಿವೆ. ಅವಧಿ ಪೂರ್ಣಗೊಳ್ಳದಿರುವ 9 ಗ್ರಾಮ ಪಂಚಾಯತ್ ಹೊರತುಪಡಿಸಿ ಉಳಿದ 93 ಗ್ರಾಮ ಪಂಚಾಯತ್ಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2020ರ ನವೆಂಬರ್ 30 ರಿಂದ ಡಿಸೆಂಬರ್ 31 ರ ಸಂಜೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯು ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ 2 ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಚುನಾವಣೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ 26 ಹಾಗೂ ನೆಲಮಂಗಲ ತಾಲೂಕಿನ 21 ಗ್ರಾಮ ಪಂಚಾಯತ್ಗೆ ನಡೆಯಲಿದೆ. ಡಿಸೆಂಬರ್ 11 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಡಿಸೆಂಬರ್ 12 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ಡಿಸೆಂಬರ್ 14 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮತದಾನ ಡಿಸೆಂಬರ್ 22 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮರು ಮತದಾನ ಅಗತ್ಯ ಇದ್ದಲ್ಲಿ ಡಿಸೆಂಬರ್ 24 ರಂದು ನಡೆಯಲಿದೆ. ಡಿಸೆಂಬರ್ 30 ರಂದು ಬೆಳಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಡಿಸೆಂಬರ್ 31 ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ.
ಇದನ್ನು ಓದಿ: ಜೈಲಿನಲ್ಲಿದ್ದುಕೊಂಡೇ ಡೀಲ್: ವಿಚಾರಣಾಧೀನ ಕೈದಿಗಳಿಬ್ಬರಿಂದ ವ್ಯಾಪಾರಿಗೆ ಹಣಕ್ಕಾಗಿ ಬೆದರಿಕೆ ಕರೆ!
ಎರಡನೇ ಹಂತದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ 26 ಹಾಗೂ ದೇವನಹಳ್ಳಿ ತಾಲೂಕಿನ 20 ಗ್ರಾಮ ಪಂಚಾಯತ್ಗಳಲ್ಲಿ ನಡೆಯಲಿದೆ. 2020ರ ಡಿಸೆಂಬರ್ 11 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನವಾಗಿದ್ದು, ಡಿಸೆಂಬರ್ 16 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಡಿಸೆಂಬರ್ 17 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ಡಿಸೆಂಬರ್ 19 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್ 27 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅಗತ್ಯ ಇದ್ದಲ್ಲಿ ಡಿಸೆಂಬರ್ 29 ರಂದು ನಡೆಯಲಿದೆ. ಡಿಸೆಂಬರ್ 30 ರಂದು ಬೆಳಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಡಿಸೆಂಬರ್ 31 ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 799 ಮೂಲ ಮತಗಟ್ಟೆಗಳಿದ್ದು, 87 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 886 ಮತಗಟ್ಟೆಗಳಿವೆ. 2,61,776 ಪುರುಷ ಮತದಾರರು, 2,58,831 ಮಹಿಳಾ ಮತದಾರರು ಹಾಗೂ ಇತರೆ ವರ್ಗಕ್ಕೆ ಸೇರಿದ 42 ಮತದಾರರಿದ್ದು, ಒಟ್ಟು 5,20,649 ಮತದಾರರಿದ್ದಾರೆ.