ದೊಡ್ಡಬಳ್ಳಾಪುರ: ಗುಂಡು ತೋಪಿನಲ್ಲಿ ಅಂದರ್ ಬಾಹರ್ ಇಸ್ಪೀಟ್ ಅಡ್ಡೆ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮಿಂಚಿನ ದಾಳಿ ನಡೆಸುವ ಮೂಲಕ ಜೂಜಾಟದಲ್ಲಿ ತೊಡಗಿದ್ದ ಐವರು ಜೂಜುಕೋರರನ್ನು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್ ಬಳಿ ಸರ್ಕಾರಿ ಗುಂಡು ತೋಪಿನಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ ಸುಳಿವು ಸಿಕ್ಕಿತ್ತು. ಖಚಿತ ಸುಳಿವಿನ ಮೇಲೆ ದಾಳಿ ನಡೆಸಿದ ದೊಡ್ಡಬಳ್ಳಾಪುರ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ ಐವರು ಜೂಜುಕೋರರನ್ನು ಬಂಧಿಸಿದ್ದಾರೆ. ನಾಲ್ವರು ಪರಾರಿಯಾಗಿದ್ದು, ದಾಳಿಯಲ್ಲಿ ಜೂಜಾಟಕ್ಕೆ ಪಣವಾಗಿಟ್ಟಿದ್ದ 1,250 ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪೊಲೀಸರ ವಶಕ್ಕೆ:
ದೊಡ್ಡಬಳ್ಳಾಪುರ ತಾಲೂಕಿನ ಭುಮೇನಹಳ್ಳಿ ಬಳಿ ಟ್ರ್ಯಾಕ್ಟರ್ನಲ್ಲಿ ಕಲ್ಲಿನ ಪುಡಿ ಸಾಗಿಸಲಾಗುತ್ತಿತ್ತು. ಅನುಮಾನದ ಮೇಲೆ ಗಸ್ತಿನಲ್ಲಿದ್ದ ಪೊಲೀಸರು ಪರಿಶೀಲನೆ ನಡೆಸಿದಾಗ ಟ್ರ್ಯಾಕ್ಟರ್ ಚಾಲಕ ರಸ್ತೆಯಲ್ಲಿಯೇ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾದ್ದಾನೆ.
ಕಲ್ಲು ಪುಡಿಯನ್ನು ಕೆದಕಿ ನೋಡಿದಾಗ ಒಳಭಾಗದಲ್ಲಿ ಮರಳು ಪೊಲೀಸರಿಗೆ ಕಂಡು ಬಂದಿದೆ. ಕಲ್ಲು ಪುಡಿಯನ್ನು ಮರಳಿನ ಮೇಲ್ಭಾಗದಲ್ಲಿ ಹಾಕಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿತ್ತು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.