ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ರೌಡಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡುವ ಮೂಲಕ ಆರೋಪಿಗಳನ್ನ ಬಗ್ಗು ಬಡಿಯುತ್ತಿದ್ದಾರೆ. ಇದೀಗ ಕೆ.ಜಿ ಹಳ್ಳಿ ಪೊಲೀಸರು ಇಬ್ಬರು ರೌಡಿಶೀಟರ್ಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.
ಕೆ.ಜಿ ಹಳ್ಳಿಯ ಫಯಾಜ್ ಅಲಿಯಾಸ್ ಪಂಚು ಮತ್ತು ವಾಸೀಂ ಅಲಿಯಾಸ್ ಕುಚ್ಚಮಟ್ಟಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಇಬ್ಬರು ಆರೋಪಿಗಳು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಜಿ ಹಳ್ಳಿ ರೌಡಿಶೀಟರ್ ಸಲೀಂ ಎಂಬಾತನನ್ನ ಕೊಲೆ ಮಾಡಿದ್ರು. ಹೀಗಾಗಿ ಇವ್ರ ಪತ್ತೆಗೆ ಡಿಸಿಪಿ ರಾಹುಲ್ ನೇತೃತ್ವದಲ್ಲಿ ಬಾಣಸಾವಡಿ ಉಪ ವಿಭಾಗದ ಎಸಿಪಿ ಹೆಚ್ ಎಂ ಮಹದೇವಪ್ಪ, ಹೆಣ್ಣೂರು ಠಾಣೆ ಇನ್ಸ್ಪೆಕ್ಟರ್ ಕುಲಕರ್ಣಿ ಕೆ.ಜಿ ಠಾಣೆ ಇನ್ಸ್ಪೆಕ್ಟರ್ ಪ್ರದೀಪ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಗುರುವಾರ ರಾತ್ರಿ ಆರೋಪಿಗಳು ಹೆಣ್ಣೂರು ಬಂಡೆ ಸಮೀಪದ ಅರ್ಕಾವತಿ ಲೇಔಟ್ ಬಳಿ ಇರುವ ಮಾಹಿತಿ ಮೇರೆಗೆ ಪೊಲೀಸರು ಬಂಧನಕ್ಕೆ ತೆರಳಿದ್ರು. ಈ ವೇಳೆ ವಾಸೀಂ ಮತ್ತು ಫಯಾಜ್ ಪೊಲೀಸರ ಮೇಲೆಯೇ ಡ್ರ್ಯಾಗರ್ನಿಂದ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಆತ್ಮರಕ್ಷಣೆಗೆ ಪೊಲೀಸ್ ಇನ್ಸ್ಪೆಕ್ಟರ್ ಕುಲಕರ್ಣಿ ಅವರು ವಾಸೀಂ ಕಾಲಿಗೆ ಹಾಗೂ ಫಯಾಜ್ ಕಾಲಿಗೆ ಇನ್ಸ್ಪೆಕ್ಟರ್ ಪ್ರದೀಪ್ ಗುಂಡು ಹಾರಿಸಿ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ವಾಸೀಂ ವಿರುದ್ಧ ಕೇರಳ ಸೇರಿದಂತೆ ನಗರದ ಹಲವು ಠಾಣೆಗಳಲ್ಲಿ ದರೋಡೆ, ಕೊಲೆ ಯತ್ನ ಪ್ರಕರಣ ದಾಖಲಾಗಿವೆ. ಸದ್ಯ ಆರೋಪಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.