ದೇವನಹಳ್ಳಿ: ಮಧ್ಯೆ ರಾತ್ರಿ ಒಂಟಿಯಾಗಿ ಓಡಾಡುವ ಬೈಕ್ಗಳನ್ನು ಟಾರ್ಗೆಟ್ ಮಾಡಿ ಅವರಿಗೆ ಲಾಂಗ್ ತೋರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಈಗ ಕಂಬಿ ಎಣಿಸುವಂತಾಗಿದೆ. ಖದೀಮರನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂದೀಪ್ ರೆಡ್ಡಿ ಆಲಿಯಾಸ್ ಕೋತಿರೆಡ್ಡಿ, ಶ್ರೀನಿವಾಸ್, ನವೀನ್, ರಜನಿಕಾಂತ್, ಸೀನ, ಪ್ರದೀಪ್ ಹಾಗೂ ಓರ್ವ ಬಾಲಕ ಈ ಬಂಧಿತ ಗ್ಯಾಂಗ್ನಲ್ಲಿದ್ದಾನೆ. ಬಂಧಿತರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಮೂಲದವರಾಗಿದ್ದಾರೆ. ಇವರು ಸಣ್ಣಪುಟ್ಟ ಕೆಲಸಗಳನ್ನ ಮಾಡಿಕೊಂಡಿದ್ದು, ರಾತ್ರಿ ವೇಳೆ ರಸ್ತೆಯಲ್ಲಿ ಸಿಕ್ಕ ಸಿಕ್ಕ ಒಂಟಿ ಬೈಕ್ ಸವಾರರು ಹಾಗೂ ದಂಪತಿಗಳನ್ನ ಬೆದರಿಸಿ ದರೋಡೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದರು.
ಕಳೆದ ತಿಂಗಳು ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಗ್ಗಲಹಳ್ಳಿ ಗ್ರಾಮದ ಬಳಿ ಒಂಟಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಗೆ ಲಾಂಗ್ ತೋರಿಸಿ ಮಾಂಗಲ್ಯ ಸೇರಿದಂತೆ, ಚಿನ್ನದ ಉಂಗುರವನ್ನ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು 7 ಮಂದಿ ದರೋಡೆಕೋರರನ್ನು ಹೆಡೆಮುರಿ ಕಟ್ಟಿದ್ದಾರೆ.
ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಗ್ಗಲಹಳ್ಳಿ ಸುತ್ತಮುತ್ತ ಖದೀಮರನ್ನು ಬಂಧಿಸುವುದಕ್ಕಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಖದೀಮರಿಗಾಗಿ ಪೊಲೀಸರು ಹಗಲು ರಾತ್ರಿ ಎನ್ನದೆ ಕಾಯುತ್ತಿದ್ದರು. ಕಗ್ಗಲಹಳ್ಳಿಯಿಂದ ದರೋಡೆ ಮಾಡಿ ಬರುತ್ತಿದ್ದ ಅನುಮಾನಾಸ್ಪದ ಕಾರೊಂದನ್ನು ನಮ್ಮ ಸಿಬ್ಬಂದಿ ಚೇಸ್ ಮಾಡಿದ್ದರು. ಈ ವೇಳೆ ಕಾರಿನಲ್ಲಿದ್ದ ಆರೋಪಿಗಳು ನಮ್ಮ ಜೀಪ್ಗೆ ಗುದ್ದಿ ಕಾರು, ಮೊಬೈಲ್‌ಗಳನ್ನು ಅಲ್ಲೇ ಬಿಟ್ಟು ಎಸ್ಕೆಪ್ ಆಗಿದ್ದರು.
ಪೊಲೀಸ್ ಜೀಪ್ ಚಾಲಕ ಕಳ್ಳನೋರ್ವನನ್ನು ಚೇಸ್ ಮಾಡಿ ಹಿಡಿದಿದ್ದು, ದರೋಡೆಕೋರರು ಬಳಸುತ್ತಿದ್ದ ಫೋನ್‌ಗಳ ಆಧಾರದಲ್ಲಿ ಆರೋಪಿಗಳ ಗ್ಯಾಂಗ್ನ್ನು ಬಂಧಿಸಲಾಗಿದೆ. ಈ ಆರೋಪಿಗಳ ಮೇಲೆ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೇಸ್‌ಗಳು ದಾಖಲಾಗಿವೆ. ಗ್ಯಾಂಗ್ ಲೀಡರ್ ಸಂದೀಪ್ ರೆಡ್ಡಿ ಮೇಲೆ ವಿವಿಧ ಠಾಣೆಗಳಲ್ಲಿ 20 ಪ್ರಕರಣಗಳಿವೆ.
ಬಂಧಿತರಿಂದ 8 ಲಕ್ಷ ಮೌಲ್ಯದ ಒಂದು ಕಾರು, ಚಿನ್ನದ ಉಂಗುರ, ತಾಳಿ, ಎರಡು ಬೈಕ್‌ಗಳು, ಒಂದು ಲ್ಯಾಪ್ ಟಾಪ್ ಸೇರಿದಂತೆ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ದೊಡ್ಡಬಳ್ಳಾಪುರ ಡಿವೈಎಸ್‌ಪಿ ಮೋಹನ್ ಕುಮಾರ್ ಮಾಹಿತಿ ನೀಡಿದರು.