ದೊಡ್ಡಬಳ್ಳಾಪುರ : ಬಿಬಿಎಂಪಿ ಕಸ ಸಂಗ್ರಹವನ್ನ ತಾಲೂಕಿನ ಚಿಗರೇನಹಳ್ಳಿಯ ಎಂಎಸ್ಜಿಪಿ ಖಾಸಗಿ ಘಟಕದಲ್ಲಿ ಮಾಡಲಾಗುತ್ತಿದೆ. ಕಳೆದೆರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ಕಸ ಸಂಗ್ರಹದ ಕಟ್ಟೆ ಒಡೆದು ಕೆರೆಗೆ ಹರಿಯುತ್ತಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ ಸಾವಿರಾರು ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತೆ. ಈ ಕಸವನ್ನ ತಾಲೂಕಿನ ಚಿಗರೇನಹಳ್ಳಿಯ ಎಂಎಸ್ಜಿಪಿ ಕಸ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಸುಮಾರು 70 ಎಕರೆ ವಿಸ್ತೀರ್ಣದಲ್ಲಿ ಕಸ ಸಂಗ್ರಹವಾಗಿದೆ. ಕಸದಿಂದ ಬರುವ ಕೆಟ್ಟ ಗಾಳಿ ಮತ್ತು ನೊಣಗಳ ಹಾವಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನರಕ ದರ್ಶನವಾಗಿದೆ.
ಮಳೆಗಾಲದಲ್ಲಿ ಎಂಎಸ್ಜೆಪಿ ಘಟಕದಲ್ಲಿನ ಕಸದ ರಾಶಿಯಿಂದ ಬರುವ ವಿಷಯುಕ್ತ ನೀರನ್ನು ತಡೆಯುವ ಕಾರಣಕ್ಕೆ ಮಣ್ಣಿನಿಂದ ಕಟ್ಟೆ ಕಟ್ಟಲಾಗಿದೆ. ಆದರೆ, ಕಳೆದೆರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ಕಟ್ಟೆ ಒಡೆದು ನೀರು ಕೆರೆಗೆ ಹರಿಯುತ್ತಿದೆ. ಎಂಎಸ್ಜಿಪಿ ಘಟಕದಿಂದ ಕೂಗಳತೆಯ ದೂರದಲ್ಲಿರುವ ತಣ್ಣೀರಹಳ್ಳಿ ಸುತ್ತಲು ಹರಿಯುವ ಕಾಲುವೆಗೆ ಬಂದಿದೆ.
ಮುಂದೆ ಈ ವಿಷಯುಕ್ತ ನೀರು ಮಾವತ್ತೂರು ಕೆರೆಗೆ ಹೋಗಲಿದೆ. ಬಯಲು ಸೀಮೆಗೆ ಕುಡಿಯುವ ನೀರಿಗಾಗಿ ಎತ್ತಿನಹೊಳೆ ಯೋಜನೆಯಲ್ಲಿ ನಿರ್ಮಾಣವಾಗುವ ಬೈರಗೊಂಡ್ಲು ಜಲಾಶಯಕ್ಕೂ ಈ ವಿಷಯುಕ್ತ ನೀರು ಹರಿಯಲಿದೆ. ಈಗಾಗಲೇ ಬಯಲು ಸೀಮೆಯ ಜನರು ಎಂಎಸ್ಜಿಪಿ ಘಟಕ ಸ್ಥಗಿತಕ್ಕೆ ಒತ್ತಾಯಿಸಿ ಹೋರಾಟ ಮಾಡಿದ್ದಾರೆ.
ತಣ್ಣೀರಹಳ್ಳಿಯ ಸುತ್ತಲು ಈ ವಿಷಯುಕ್ತ ನೀರು ಹರಿಯುವುದರಿಂದ ಕೆಟ್ಟ ವಾಸನೆ ಗ್ರಾಮದ ಸುತ್ತಲೂ ಆವರಿಸಿದೆ. ವಿಷದ ನೀರು ಅಂತರ್ಜಲ ಸೇರುತ್ತಿದೆ. ಇದೇ ನೀರನ್ನು ಸುತ್ತಮುತ್ತಲಿನ ಗ್ರಾಮಸ್ಥರು ಕುಡಿಯುತ್ತಿದ್ದಾರೆ. ಜಾನುವಾರುಗಳು ಸಹ ಇದೇ ನೀರು ಕುಡಿಯಬೇಕು. ವಿಷಯುಕ್ತ ನೀರು ಕುಡಿಯುವುದರಿಂದ ಜನರು ಮತ್ತು ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗಿವೆ ಎಂಬುದು ಸ್ಥಳೀಯರ ನೋವಿನ ಮಾತಾಗಿದೆ.
ಇದನ್ನೂ ಓದಿ : Video : ಗುಡ್ಡದ ಮೇಲಿಂದ ಹರಿದು ಬರುತ್ತಿದೆ ಕ್ಷೀರ.. ಅಚ್ಚರಿ ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನ..
ತೋಟಗಳಿಗೆ ಈ ನೀರನ್ನು ಬಳಸುವುದರಿಂದ ತೋಟ ಸಹ ಒಣಗುತ್ತಿವೆ ಎಂದು ರೈತರು ತಮ್ಮ ನೋವು ತೋಡಿಕೊಂಡಿದ್ದಾರೆ. ನೊಣ ಮತ್ತು ಸೊಳ್ಳೆಗಳು ಗ್ರಾಮಕ್ಕೆ ಮುತ್ತಿಗೆ ಹಾಕುವುದರಿಂದ ಜನರ ನೆಮ್ಮದಿ ಕೆಡಿಸಿವೆ. ಎಂಎಸ್ ಜಿಪಿ ಘಟಕವನ್ನ ತೆರವು ಮಾಡುವಂತೆ ಭಕ್ತರಹಳ್ಳಿ ಪಂಚಾಯತ್ ಗೆ ಒತ್ತಾಯಿಸಲಾಗುತ್ತಿದೆ.
ಆದರೆ, ಎಂಎಸ್ಜಿಪಿ ಘಟಕದವರು ಪಂಚಾಯತ್ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಸುತ್ತಮುತ್ತಲಿನ ಜನರ ಜೀವಕ್ಕೆ ಸಂಚಕಾರ ತಂದಿರುವ ಘಟಕವನ್ನು ಇಲ್ಲಿಂದ ತೆರವು ಮಾಡಿ ಮತ್ತೆ ಹಿಂದಿನ ನೆಮ್ಮದಿಯ ಜೀವನ ಕಂಡುಕೊಳ್ಳಲು ನೆರವಾಗುವಂತೆ ಸ್ಥಳೀಯರು ಮನವಿ ಮಾಡಿದಾರೆ.