ದೇವನಹಳ್ಳಿ(ಬೆಂ. ಗ್ರಾಮಾಂತರ) : ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 11 ಗಂಟೆಯ ವಿಮಾನದಲ್ಲಿ ಗೋವಾಗೆ ತೆರಳಿದ್ದು, ಪ್ರಯಾಣಿಕರನ್ನು ಭದ್ರತಾ ಸಿಬ್ಬಂದಿ ತಪಾಸಣೆ ಮಾಡುವಾಗ ಅಸ್ನೋಟಿಕರ್ ಲಗೇಜ್ನಲ್ಲಿ ಪಿಸ್ತೂಲ್ ಪತ್ತೆಯಾಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಪಿಸ್ತೂಲ್ ಪತ್ತೆ ಹಿನ್ನೆಲೆ ಭದ್ರತಾ ಸಿಬ್ಬಂದಿ ಮಾಜಿ ಸಚಿವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸುವ ಕಾರಣಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಆನಂದ್ ಅಸ್ನೋಟಿಕರ್ ಅವರನ್ನು ಕರೆತಂದರು. ವಿಚಾರಣೆ ನಡೆಸಿದಾಗ ಪಿಸ್ತೂಲ್ಗೆ ಪರವಾನಿಗೆ ಪಡೆದಿರುವ ಮಾಹಿತಿ ತಿಳಿದು ಬಂದಿದೆ.
ಅಸ್ನೋಟಿಕರ್ ಪ್ರಯಾಣದ ವೇಳೆ ಪಿಸ್ತೂಲ್ ಪರವಾನಿಗೆಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗದ ಹಿನ್ನೆಲೆ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಆನಂತರ ಪಿಸ್ತೂಲ್ ಪರವಾನಿಗೆ ದಾಖಲೆ ಪತ್ರಗಳನ್ನ ಠಾಣೆಗೆ ತರಿಸಿಕೊಂಡು ಅಸ್ನೋಟಿಕರ್ ಪೊಲೀಸರಿಗೆ ನೀಡಿದ್ದಾರೆ. ದಾಖಲೆ ಪತ್ರ ಪರಿಶೀಲನೆಯ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಅಸ್ನೋಟಿಕರ್ ಅವರನ್ನು ಬಿಟ್ಟು ಕಳುಹಿಸಿದ್ದಾರೆ.