ಹೊಸಕೋಟೆ: ರಾಜಕೀಯಕ್ಕೆ ಬಂದಿರುವುದು ಫ್ಯಾಷನ್ ಗೋಸ್ಕರ ಅಲ್ಲ, ಜನರ ಸೇವೆ ಮಾಡಲು. ಬಿಜೆಪಿ ಸರ್ಕಾರದಲ್ಲಿ ಒಳ್ಳೆಯ ಖಾತೆ ನೀಡುವ ನಂಬಿಕೆ ಇತ್ತು. ಆದರೆ, ನೀಡಲಿಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಸಿಎಂ ಬಿಎಸ್ವೈ ವಿರುದ್ಧ ಹರಿಹಾಯ್ದರು.
ನಗರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶಿಕ್ಷಕರಿಗೆ ದಿನಸಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವನಾಗಲು ನನಗೂ ಆಸೆ ಇದೆ. ಕಳೆದ ಸರ್ಕಾರದಲ್ಲಿ ವಸತಿ ಸಚಿವನಾಗಿ ಕಾರ್ಯನಿರ್ವಹಿಸಿದ್ದೆ, ಅದೇ ರೀತಿ ಈ ಬಾರಿ ಕೊಡುವುದಾಗಿ ಹೇಳಿ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರ ಕುರಿತು ಜಿಲ್ಲೆಯ ಕಾರ್ಯಕರ್ತರು ಪ್ರಶ್ನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆಯುತ್ತಿಲ್ಲ ಪ್ರತಿ ಬಾರಿ ಕೇಳಿದರೂ ಉತ್ತಮ ಖಾತೆ ನೀಡುವುದಾಗಿ ಭರವಸೆ ನೀಡಿ ಕಳುಹಿಸುತ್ತಿದ್ದಾರೆ ಅಷ್ಟೇ. ಆದರೆ, ಇದೂವರೆಗೂ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ರಾಜಕೀಯಕ್ಕೆ ಬಂದಿರುವುದು ಫ್ಯಾಷನ್ ಗೋಸ್ಕರ ಅಲ್ಲ. ಜನರ ಸೇವೆ ಮಾಡಲು, ಕಣ್ಣೀರು ಒರೆಸಲು ಬಂದಿದ್ದೇವೆ. ಸಂಪತ್ತು ಬಂದಾಗ ದಾನ ಮಾಡು, ಬಡತನ ಬಂದಾಗ ಧ್ಯಾನ ಮಾಡು, ಅಧಿಕಾರ ಬಂದಾಗ ಸೇವೆ ಮಾಡು ಎಂಬ ಮಾನದಂಡದ ಮೇಲೆ ನಾವು ರಾಜಕೀಯಕ್ಕೆ ಬಂದಿದ್ದೇವೆ ಎಂದರು.
ನಮಗೆ ಅಧಿಕಾರ ಕೊಟ್ಟಿರುವುದು ಜನ, ಅವರು ಕಟ್ಟುತ್ತಿರುವ ಹಣದಿಂದ ನಾವು ಸರ್ಕಾರ ನಡೆಸುತ್ತಿದ್ದೇವೆ. ಸರ್ಕಾರ ನೋಟ್ ಪ್ರಿಂಟ್ ಮಾಡಲ್ಲ. ನೀವು ಕಟ್ಟಿರುವ ಹಣ, ನೀವು ಕೊಟ್ಟಿರುವ ಅಧಿಕಾರ ಎರಡೂ ನಿಮ್ಮದೇ, ನಿಮ್ಮಿಂದ ನಾವು ಅಧಿಕಾರ ನಡೆಸುತ್ತಿದ್ದೇವೆ. ಕಷ್ಟ ಕಾಲದಲ್ಲಿ ನಿಮಗೆ ನಾವು ಸಹಾಯ ಮಾಡಬೇಕು ನಿಮ್ಮ ಪ್ರಾಣ ಉಳಿಸಬೇಕು ಎಂದು ಹೇಳಿದರು.