ನೆಲಮಂಗಲ: ನಗರದ ಕೋಟಿ ಬೀದಿ ನಿವಾಸಿ 73 ವರ್ಷ ವೃದ್ಧ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ವಾರದ ಹಿಂದಷ್ಟೇ ಕೋವಿಡ್ನಿಂದ ಈ ವೃದ್ಧನ ಮಗ ಸಹ ಸಾವನ್ನಪ್ಪಿದ್ದ.
ಮಗನಿಂದ 73 ವರ್ಷ ವೃದ್ಧನಿಗೆ ಸೋಂಕು ತಗಲಿತ್ತು. ಕಳೆದ ಮೂರು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿಗೆ ಇಲ್ಲಿಯವರೆಗೂ ಐವರು ಮೃತಪಟ್ಟಿದ್ದು, ನೆಲಮಂಗಲದಲ್ಲಿ ಆತಂಕ ಮೂಡಿಸಿದೆ.
ದಿನದಿಂದ ದಿನಕ್ಕೆ ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ನೆಲಮಂಗಲ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಸ್ಥಳೀಯರೇ ಸ್ವಯಂ ಪ್ರೇರಿತರಾಗಿ ಸೀಲ್ ಡೌನ್ ಮಾಡಲು ಮುಂದಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ನಗರದ ವರ್ತಕರ ಸಂಘ ಕೂಡ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ನೀಡಿದೆ.
ತಾಲೂಕಿನಲ್ಲಿ ಮಹಾಮಾರಿ ಕೊರೊನಾ ಸೋಂಕು ಈಗಾಗಲೇ 68ಕ್ಕೂ ಹೆಚ್ಚು ಮಂದಿಯಲ್ಲಿ ಪತ್ತೆಯಾಗಿದೆ. ಐವರು ಮೃತಪಟ್ಟಿದ್ದಾರೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.