ಬೆಂಗಳೂರು: ಕಳೆದ ಜುಲೈ 31 ರಂದು ಕೆಂಪೇಗೌಡ ಏರ್ಪೋರ್ಟ್ ಬಳಿ ಶವವಾಗಿ ಪೊಲೀಸರಿಗೆ ಪತ್ತೆಯಾಗಿದ್ದ ಕೋಲ್ಕತ್ತಾ ಮೂಲದ ಮಾಡೆಲ್ ಪೂಜಾ ಸಿಂಗ್ ಹತ್ಯೆಯ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹೆಚ್.ಎಂ. ನಾಗೇಶ್(22) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಮಾಡೆಲ್ ಬಳಿ ಹಣ ಇರಬಹುದು ಎನ್ನುವ ಆಸೆಗೆ ಬಿದ್ದು, ಆಕೆಯನ್ನ ಕೊಲೆ ಮಾಡಿದ್ದಾಗಿ ಓಲಾ ಕ್ಯಾಬ್ ಡ್ರೈವರ್ ಆಗಿರುವ ಆರೋಪಿ ನಾಗೇಶ್ ಒಪ್ಪಿಕೊಂಡಿದ್ದಾನೆ. ಕೇವಲ ಐದುನೂರು ಚಿಲ್ಲರೆ ರೂಪಾಯಿ ಮಾತ್ರ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಹಂತಕ. ಸದ್ಯ ಹೆಚ್ಚಿನ ತನಿಖೆಗಾಗಿ ಬಾಗಲೂರು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಇನ್ನು ಕೊಲೆಯಾದ ಮಾಡೆಲ್ ಪೂಜಾ ಸಿಂಗ್ ಕೋಲ್ಕತ್ತಾದಲ್ಲಿ ಮಾಡೆಲಿಂಗ್ ಜೊತೆಗೆ ಈವೆಂಟ್ ಮ್ಯಾನೇಜ್ಮೆಂಟ್ ಮಾಡಿಕೊಂಡಿದ್ದರು. ಜುಲೈ 30 ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದಳು. ಕೆಲಸ ಮುಗಿಸಿ ಜುಲೈ 31 ರಂದು ವಾಪಸ್ ತೆರಳಲು ಏರ್ಪೋರ್ಟ್ಗೆ ಓಲಾ ಬುಕ್ ಮಾಡಿದ್ದಾಗ ಆರೋಪಿ ಕ್ಯಾಬ್ ಚಾಲಕ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.