ಬೆಂಗಳೂರು: ನಗರದ ಕೆರೆಗಳ ಸಂರಕ್ಷಣೆ ಮತ್ತು ಪುನಶ್ಚೇತನ ಸಂಬಂಧ ಸಿಟಿಜನ್ ಆ್ಯಕ್ಷನ್ ಗ್ರೂಪ್ ಮತ್ತು ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧ್ಯ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರೊಬ್ಬರ ಪರ ವಕೀಲ ಜಿ.ಆರ್. ಮೋಹನ್, ಮಲ್ಲತ್ತಹಳ್ಳಿ ಕೆರೆಯಲ್ಲಿ ಅನಧಿಕೃತವಾಗಿ ಗಾಜಿನ ಮನೆ, ತೂಗುಸೇತುವೆ ನಿರ್ಮಾಣ ಮತ್ತು ಮಕ್ಕಳ ಆಟದ ರೈಲಿಗೆ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಕಾಮಗಾರಿಗಳು ಮನೋರಂಜನಾ ಚಟುವಟಿಕೆಗಳ ವ್ಯಾಪ್ತಿಗೆ ಬರಲಿದೆ.
ಆದರೆ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಸೆಕ್ಷನ್ 12(3) ಪ್ರಕಾರ ಕೆರೆ ಪ್ರದೇಶದಲ್ಲಿ ಮನೋರಂಜನಾ ಚಟುವಟಿಕೆಗಳ ಕಾಮಗಾರಿ ನಡೆಸುವುದು ನಿಷಿದ್ಧವಾಗಿದೆ. ಹಾಗಾಗಿ, ಈ ಎಲ್ಲಾ ಕಾಮಗಾರಿ ನಡೆಸದಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ಬಂಧ ಹೇರಲು ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಬೇಕು ಎಂದು ಕೋರಿದರು.
ಬಿಬಿಎಂಪಿ ಪರ ವಕೀಲರು, ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯಡಿ ಮಲ್ಲತ್ತಹಳ್ಳಿಯಲ್ಲಿ ಕೆರೆ ಅಭಿವೃದ್ಧಿಯ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ಅದರ ಪ್ರಕಾರ ಕೆರೆ ಏರಿ ಮತ್ತು ಕಾಲುದಾರಿ ಅಭಿವೃದ್ಧಿ, ತಡೆಗೋಡೆ, ತೂಗು ಸೇತುವೆ, ಗಾಜಿನ ಮನೆ ಮತ್ತು ಮಕ್ಕಳ ಆಟದ ರೈಲುಗೆ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.
ಸರ್ಕಾರದ ಅನುಮೋದನೆ ಇದ್ದರೂ ತೂಗು ಸೇತುವೆ, ಗಾಜಿನ ಮನೆ ಮತ್ತು ಮಕ್ಕಳ ಆಟದ ರೈಲುಗೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ಸದ್ಯ ನಡೆಸುವುದಿಲ್ಲ ಎಂದು ತಿಳಿಸಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿದಾರರ ಮಧ್ಯಂತರ ಅರ್ಜಿಯನ್ನು ಇತ್ಯರ್ಥಪಡಿಸಿತು.
ಇದನ್ನೂ ಓದಿ: ಟೆಂಡರ್ ಬಿಡ್ ತೆರೆಯುವ ಮುನ್ನ ಬದಲಾವಣೆ ಮಾಡಬಹುದು: ಹೈಕೋರ್ಟ್