ಬೆಂಗಳೂರು: ಹಗಲಲ್ಲಿ ಭಿಕ್ಷೆ ಬೇಡಿ, ರಾತ್ರಿ ಬಸ್ ನಿಲ್ದಾಣದಲ್ಲಿ ತಂಗುತ್ತಿದ್ದ ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದು, ಆತನ ಪತ್ನಿ ಶವ ಸಂಸ್ಕಾರಕ್ಕೂ ದಿಕ್ಕಿಲ್ಲದೆ ಮಕ್ಕಳೊಂದಿಗೆ ಪರದಾಡುತ್ತಿದ್ದ ಮನಕಲಕುವ ಘಟನೆ ಹೊಸಕೋಟೆ ತಾಲೂಕು ನಂದಗುಡಿ ಬಸ್ ನಿಲ್ದಾಣನಲ್ಲಿ ನಡೆದಿದೆ.
ಇನ್ನು ಇವರ ಕಷ್ಟಕ್ಕೆ ಮರುಗಿದ ನಂದಗುಡಿ ಪೊಲೀಸರು, ಗ್ರಾ.ಪಂ ಸಿಬ್ಬಂದಿ, ಗ್ರಾಮಸ್ಥರ ಮೂಲಕ ನೇರವಾಗಿ ಅಂತ್ಯಕ್ರಿಯೆಯನ್ನು ಮಾಡಿಸಿದರಲ್ಲದೆ, ಅವರ ಸಂಬಂಧಿಕರನ್ನು ಪತ್ತೆಹಚ್ಚಿ ನೊಂದ ಮಹಿಳೆ, ಮಕ್ಕಳನ್ನು ಅವರ ಸುಪರ್ದಿಗೆ ಒಪ್ಪಿಸಿದ್ದಾರೆ.
ಪೊಲೀಸರ ಸಹಾಯಕ್ಕೆ ಮೆಚ್ಚುಗೆ :
ವಿಷಯ ತಿಳಿದ ನಂದಗುಡಿ ಕಾನೂನು ಮತ್ತು ಸುವ್ಯವಸ್ಥೆಯ ಆರಕ್ಷಕ ಉಪ ನಿರೀಕ್ಷಕ ಲಕ್ಷ್ಮಿನಾರಾಯಣ್ ಸ್ಥಳಕ್ಕೆ ತೆರಳಿ ಶವವನ್ನು ಆಂಬ್ಯುಲೆನ್ಸ್‌ಗೆ ಸಾಗಿಸುವಲ್ಲಿ ನೆರವಾದರು. ಗೌರವಯುತವಾಗಿ ಶವ ಸಂಸ್ಕಾರಕ್ಕೆ ಬೇಕಾದ ಎಲ್ಲ ರೀತಿಯ ಸಿದ್ದತೆಗಳಿಗೆ ತಾವೇ ಸ್ವತಃ ₹2 ಸಾವಿರ ನೀಡಿದರು. ಗ್ರಾಮ ಪಂಚಾಯಿತಿಯಿಂದ ₹5 ಸಾವಿರ ಹಾಗೂ ಸಾರ್ವಜನಿಕರಿಂದ ಸೇರಿ ಒಟ್ಟು ₹25 ಸಾವಿರ ಹಣವನ್ನು ಒಟ್ಟುಗೂಡಿಸಿ ಮೃತನ ಕುಂಟುಬದವರಿಗೆ ನೀಡಿ ಶವ ಸಂಸ್ಕಾರ ಮುಗಿಸಿದರು . ಶವ ಸಂಸ್ಕಾರದ ಬಳಿಕ ಉಳಿದ ಹಣವನ್ನು ಜೀವನೋಪಾಯಕ್ಕೆ ಬಳಸಿಕೊಳ್ಳುವಂತೆ ಹೇಳಿದರು.