ದೊಡ್ಡಬಳ್ಳಾಪುರದ: ಮಿಸ್ ಕಾಲ್‌ನಿಂದ ಶುರುವಾದ ಪ್ರೀತಿ ಅಕ್ರಮ ಸಂಬಂಧಕ್ಕೆ ದಾರಿ ಮಾಡಿತು. ಪತ್ನಿಯ ಅಕ್ರಮ ಸಂಬಂಧಕ್ಕೆ ಕಡಿವಾಣ ಹಾಕಲು ಹೋದ ಪತಿ ಪ್ರಿಯಕರನನ್ನು ಕೊಲೆಗೈದ ಘಟನೆ ಚೆನ್ನಾದೇವಿ ಅಗ್ರಹಾರದ ಬಳಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ಮಾದವಾರದ ನಿವಾಸಿ ಚಂದ್ರಶೇಖರ್ (20) ಮೃತ ದುರ್ದೈವಿ. ಈತ ಚೆನ್ನಾದೇವಿ ಅಗ್ರಹಾರದ ನಿವಾಸಿಯೊಬ್ಬರ ಪತ್ನಿಗೆ ಮಿಸ್ ಕಾಲ್ ಕೊಟ್ಟಿದ್ದನಂತೆ. ಅದೇ ಮಿಸ್ ಕಾಲ್ ಇಷ್ಟೆಲ್ಲ ಅವಾಂತರಕ್ಕೆ ದಾರಿ ಮಾಡಿಕೊಟ್ಟಿದೆ. ಮಿಸ್ ಕಾಲ್‌ನಿಂದ ಸ್ನೇಹವಾಗಿ, ಸ್ನೇಹದಿಂದ ಪ್ರೇಮಾಂಕುರವಾಗಿದೆ. ಆಗಾಗ ಭೇಟಿ ಮಾಡುತ್ತಿದ್ದ ಇಬ್ಬರು ಅಕ್ರಮ ಸಂಬಂಧ ಹೊಂದಲು ಶುರುಮಾಡಿದ್ದರು.
ಪ್ರಕರಣದ ಪೂರ್ಣ ವಿವರ:
ಈ ಹಿಂದೊಮ್ಮೆ ಮಹಿಳೆ ಪತಿಯನ್ನು ತೊರೆದು ಮಾದವಾರದಲ್ಲಿ ಪ್ರಿಯಕರ ಚಂದ್ರಶೇಖರ್ ಜೊತೆ ವಾಸವಿದ್ದಳು. ಬಳಿಕ ಪತಿ ಹಾಗೂ ಕುಟುಂಬಸ್ಥರು ಹೋಗಿ ಪತ್ನಿಯನ್ನು ಮನವೊಲಿಸಿ ವಾಪಸ್ ಕರೆದುಕೊಂಡು ಬಂದಿದ್ದಾರೆ. ಹೇಗೋ ಅವರ ಸಂಸಾರ ಸರಿಹೋಯ್ತು ಅನ್ನುವಷ್ಟರಲ್ಲೇ ಇವರ ಮಿಸ್ ಕಾಲ್ ಪ್ರೇಮ ಮತ್ತೆ ಚಿಗುರೊಡೆದಿದೆ. ನನ್ನ ಗಂಡ ಕುಡಿದು ಹೊಡೆಯುತ್ತಾನೆ ಎನ್ನುವ ನೆಪವೊಡ್ಡಿ ಪತ್ನಿ ಗಂಡನನ್ನು ತೊರೆದು ಮತ್ತೆ ಪ್ರಿಯಕರನ ಜೊತೆ ಹೋಗಿದ್ದಾಳೆ.
ಪತ್ನಿಯ ನಡೆಯಿಂದ ಕೋಪಗೊಂಡ ಪತಿ ತನ್ನ ತಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಪತ್ನಿ ಹಾಗೂ ಆಕೆಯ ಪ್ರಿಯಕರ ವಾಸವಿದ್ದ ಮಾದವಾರಕ್ಕೆ ಬಂದು ಮಾತುಕತೆ ಪ್ರಾರಂಭಿಸಿದ್ದಾನೆ. ಮಾತುಕತೆ ವಿಕೋಪಕ್ಕೆ ತಿರುಗಿ ಮನೆಯ ಬಳಿಯೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಅಲ್ಲಿಂದ ನಾಲ್ಕು ಜನ ಚೆನ್ನಾದೇವಿ ಅಗ್ರಹಾರಕ್ಕೆ ಹೋಗುತ್ತಾರೆ. ಅಲ್ಲಿ ಮತ್ತೆ ಗಲಾಟೆ ಘರ್ಷಣೆಗೆ ತಿರುಗಿ ಚಂದ್ರಶೇಖರ್‌ಗೆ ಗಂಭೀರ ಸ್ವರೂಪದ ಗಾಯಗಳಾಗುತ್ತದೆ. ಘಟನೆಯಲ್ಲಿ ಚಂದ್ರಶೇಖರ್ ಸಾವಿಗೀಡಾಗುತ್ತಾನೆ ಎನ್ನುವ ಭಯದಲ್ಲಿ ಸ್ವತಃ ಪತಿಯೇ ಆತನನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.