ನೆಲಮಂಗಲ: ಮುಖ್ಯಮಂತ್ರಿಗಳು ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಬಿ.ಎನ್ ಬಚ್ಚೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.
ನೆಲಮಂಗಲದಲ್ಲಿ ನಡೆದ ಕೋವಿಡ್ ನಿರ್ವಹಣಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಂಸದರೆಲ್ಲರೂ ಮನೆಯಲ್ಲಿ ಕುಳಿತ್ತಿಲ್ಲ. ನಮ್ಮ ಕೆಲಸಗಳನ್ನು ನಾವು ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ. ನಮ್ಮಿಂದ ಯಾರಿಗೂ ತೊಂದರೆಯಾಗಿಲ್ಲ. ಇದನ್ನು ನಾನು ಜಂಭದಿಂದ ಹೇಳುತ್ತಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಎಲ್ಲರೊಂದಿಗೆ ಸಮನ್ವಯದಿಂದ ಹೋಗಬೇಕಾಗುತ್ತದೆ. ಮುಖ್ಯಮಂತ್ರಿಗಳು ಎಲ್ಲ ಸಂಸದರು ಸೇರಿದಂತೆ ವಿರೋಧ ಪಕ್ಷದವರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಮುಖ್ಯಮಂತ್ರಿಗಳು ಈ ರೀತಿಯಾಗಿ ಮಾಡುತ್ತಿಲ್ಲ.
ತಮಿಳುನಾಡಿನಲ್ಲಿ ಸ್ಟಾಲಿನ್ ಸರ್ಕಾರ ವಿರೋಧ ಪಕ್ಷಗಳ ಕಮೀಟಿ ಹಾಗೂ ಸರ್ವ ಪಕ್ಷಗಳ ಸಮಿತಿಯನ್ನೇ ರಚನೆ ಮಾಡಿದ್ದಾರೆ. ಕೋವಿಡ್ ಮಹಾಮಾರಿ ಹಾವಳಿ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಕುಳಿತುಕೊಳ್ಳಬೇಕು. ಆಗಲೇ ಒಳ್ಳೆಯದಾಗೋದು ಎಂದರು.
ಜನರಿಗೆ ಮಾಧ್ಯಮಗಳೇ ನೀತಿ ಹೇಳೋದು. ಸ್ಯಾನಿಟೈಸರ್ ಸಿಂಪಡಣೆ ಮಾಡಿಕೊಳ್ಳಿ. ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಜಾಗೃತಿ ಮೂಡಿಸುತ್ತೀರಿ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಮಾಧ್ಯಮ ಮಿತ್ರರಿಗೆ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.