ನೆಲಮಂಗಲ(ಬೆಂಗಳೂರು): ಮಹಾಮಾರಿ ಕೋವಿಡ್ಗೆ ಪತಿ ಬಲಿಯಾದ ನೋವಿನಿಂದ ಹೊರಬರಲಾರದೆ ಪತ್ನಿಯು ತನ್ನ ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿದ ಪ್ರಕೃತಿ ಬಡಾವಣೆಯಲ್ಲಿ ನಡೆದಿದೆ.
ವಸಂತ (40) ಎಂಬುವರು ತನ್ನ ಇಬ್ಬರು ಮಕ್ಕಳಾದ ಮಗ ಯಶ್ವಂತ್ (15) ಹಾಗೂ ಮಗಳು ನಿಶ್ಚಿತಾ (6) ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ನೋಟ್ ಬರೆದಿಟ್ಟಿದ್ದಾರೆ.
ತೋಟದಗುಡ್ಡದಹಳ್ಳಿದ ಪ್ರಕೃತಿ ಬಡಾವಣೆಯಲ್ಲಿ ಕಳೆದ 3 ವರ್ಷಗಳ ಹಿಂದೆ ಮನೆ ಖರೀದಿಸಿದ್ದ ಪ್ರಸನ್ನ ಕುಮಾರ್ ಪತ್ನಿ, ತನ್ನಿಬ್ಬರು ಮಕ್ಕಳ ಜೊತೆಗೆ ಜೀವನ ನಡೆಸುತ್ತಿದ್ದರು. ಅದರೀಗ ಇಡೀ ಮನೆಯೇ ಸ್ಮಶಾನದಂತಾಗಿದೆ. ಮನೆಯ ಒಂದು ಕೊಠಡಿಯಲ್ಲಿ ವಸಂತ ತನ್ನ ಮಗಳು ನಿಶ್ಚಿತಾ ಜೊತೆ ನೇಣಿಗೆ ಶರಣಾಗಿದ್ದರೆ, ಮತ್ತೊಂದು ಕೊಠಡಿಯಲ್ಲಿ ಯಶ್ವಂತ್ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಫೋನ್ ಕಾಲ್ನಿಂದ ಘಟನೆ ಬೆಳಕಿಗೆ:
ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಮಗ ಯಶ್ವಂತ್ಗೆ ಆತ್ನಹತ್ಯೆಗೆ ಪ್ರಚೋದಿಸಿದ ತಾಯಿ ವಸಂತ, ಮಗಳನ್ನ ನೇಣಿನ ಕುಣಿಕೆಗೆ ಏರಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗ್ತಿದೆ. ಇದೇ ವೇಳೆ ಮೃತಳ ಸಹೋದರ ಫೋನ್ ಮಾಡಿದ್ದು, ಕರೆ ಸ್ವೀಕರಿಸದಿದ್ದಾಗ ಹಾಗೂ ಸುತ್ತಮುತ್ತಲ ಜನ ಅನುಮಾನಗೊಂಡು ನೋಡಿದ್ದಾರೆ. ಆಗ ಮನೆ ಒಳಗಿನಿಂದ ಬಾಗಿಲು ಲಾಕ್ ಮಾಡಿಕೊಂಡಿದ್ದು, ಮತ್ತೆ ಏಣಿ ಏರಿ ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಬದುಕು ಕಿತ್ತುಕೊಂಡ ಕೊರೊನಾ:
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮೂಲದ ಪತಿ ಪ್ರಸನ್ನ ಕುಮಾರ್ ಬಿಎಂಟಿಸಿಯ ಚಾಲಕ ಕಂ ನಿರ್ವಾಹಕನಾಗಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಪ್ರಕೃತಿ ಬಡಾವಣೆಯಲ್ಲಿ ಮನೆ ಖರೀದಿಗೆ 20 ಲಕ್ಷ ರೂ.ಗಳಷ್ಟು ಸಾಲ ಸಹ ಮಾಡಿದ್ದರು. ಈ ನಡುವೆ ಪ್ರಸನ್ನ ಕುಮಾರ್ಗೆ ಮಹಾಮಾರಿ ಕೊರೊನಾ ತಗುಲಿದ್ದು, 2020ರ ಆಗಸ್ಟ್ 7ರಂದು ಚೇತರಿಸಿಕೊಳ್ಳದೆ ಮೃತಪಟ್ಟಿದ್ದರು.
ಡೆತ್ನೋಟ್ನಲ್ಲಿ ಏನಿದೆ:
ಗಂಡನ ಅಗಲಿಕೆಯ ಬೇಸರದಿಂದ ವಸಂತ, ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಅವರಿಗೆ ಕುಟುಂಬಸ್ಥರು, ಸ್ಥಳೀಯರು ಬುದ್ದಿವಾದ ಹೇಳಿ ಕಳುಹಿಸಿದ್ದರಂತೆ. ಖಿನ್ನತೆಗೆ ಒಳಗಾಗಿದ್ದ ಅವರು, ತನ್ನ ಸಾವಿಗೆ ತಾನೇ ಕಾರಣ, ನನ್ನ ಗಂಡನನ್ನ ಕಳೆದುಕೊಂಡ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನವರು ಅಂತ ಯಾರೂ ಇಲ್ಲ. ಈ ಮನೆ ಮಾರಾಟ ಮಾಡಿ ನಮ್ಮ ಸಾಲ ತೀರಿಸಿ ಎಂದು ಮೂರು ಪುಟಗಳ ಡೆತ್ನೋಟ್ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ : ಶಂಕರ್, ಇಬ್ಬರು ಅಳಿಯಂದಿರ ಬಂಧನ