ಆನೇಕಲ್: ಗಂಡ ಪ್ರತಿನಿತ್ಯ ಕುಡಿದು ಬಂದು ಕಿರುಕುಳ ನೀಡ್ತಾನೆ ಎಂದು ಮನ ನೊಂದ ಪತ್ನಿ ತನ್ನ ಇಬ್ಬರು ಮಕ್ಕಳ ಸಮೇತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆನ್ನಾಗರ ಗ್ರಾಮ ಪಂಚಾಯತಿ ಬಳಿ ನಡೆದಿದೆ.
ಆನೇಕಲ್ ಪಕ್ಕದ ಚೂಡೇನಹಳ್ಳಿ ಗ್ರಾಮದ ಕುಮಾರ್ ಎಂಬುವವರ ಪತ್ನಿ ಭಾರತಿ ತನ್ನ ಇಬ್ಬರು ಮಕ್ಕಳಾದ ಪ್ರಣೀತ ಮತ್ತು ವಿನೋದ್ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಜಿಗಣಿ ಪೊಲೀಸರು ಮೃತದೇಹಗಳನ್ನು ಹೊರತೆಗೆದು ನೋಡಿದಾಗ ತಾಯಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಾಯಿ ಮತ್ತು ಇಬ್ಬರು ಮಕ್ಕಳು ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸದ್ಯ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.