ದೊಡ್ಡಬಳ್ಳಾಪುರ: ಕ್ಷೇತ್ರದ ಅಭಿವೃದ್ಧಿಯಲ್ಲಿ ದ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿ ಮುಖಂಡರು ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಬಿಡುಗಡೆಯಾಗಿದ್ದ 140 ಕೋಟಿ ಅನುದಾನದ ಹಣವನ್ನು ವಾಪಸ್ ಪಡೆಯುವಂತೆ ಬಿಜೆಪಿ ಸರ್ಕಾರಕ್ಕೆ ಒತ್ತಡ ತಂದಿದ್ದಾರೆಂದು ಕಾಂಗ್ರೆಸ್ ಶಾಸಕ ಟಿ.ವೆಂಕಟರಮಣಯ್ಯ ಆರೋಪ ಮಾಡಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಸಭಾ ಚುನಾವಣೆಯ ಅಂಗವಾಗಿ ಪತ್ರಿಕಾಗೋಷ್ಠಿ ನಡೆಸಿದ ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ ಬಿಜೆಪಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಶಾಸಕರು ಅನ್ನುವ ಕಾರಣಕ್ಕೆ ಬಿಜೆಪಿ ಸರ್ಕಾರದಲ್ಲಿ ತಾಲೂಕಿಗೆ ಅನುದಾನ ನೀಡದೆ ವಂಚಿಸಲಾಗುತ್ತಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಂಜೂರಾಗಿದ್ದ ಸುಮಾರು 140 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಿಲ್ಲ. ನಗರಕ್ಕೆ ಮಂಜೂರಾಗಿದ್ದ 20 ಕೋ.ರೂ ಅನುದಾನವನ್ನು ಬಿಜೆಪಿ ಮುಖಂಡರು ಸರ್ಕಾರದ ಮೇಲೆ ಒತ್ತಡ ತಂದು ಹಣ ಮಂಜೂರು ಆಗದಂತೆ ತಡೆ ಹಿಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಹಣ ಬಿಡುಗಡೆಯಾದರೆ ಸ್ಥಳೀಯ ಕಾಂಗ್ರೆಸ್ ಶಾಸಕರಿಗೆ ಹೆಸರು ಬರುತ್ತೆ ಅನ್ನುವ ಕಾರಣಕ್ಕೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ . ಕೊರೊನಾ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಮಾಹಿತಿ ನೀಡದಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸೋಂಕಿನ ತೀವ್ರತೆಯು ಅರಿವಿಗೆ ಬರುತ್ತಿಲ್ಲ. ಇದು ಸೋಂಕು ಹೆಚ್ಚಾಗಲು ಕಾರಣವಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.