ಬೆಂಗಳೂರು: ಕ್ಷೇತ್ರದ ಅಭಿವೃದ್ಧಿ ಹಾಗೂ ಅನುದಾನ ಬಿಡುಗಡೆ ವಿಚಾರವಾಗಿ ವಿಧಾನಸೌಧದಲ್ಲಿ ಆಡಳಿತ ಪಕ್ಷದ ಸಚಿವ ಹಾಗೂ ಶಾಸಕರ ನಡುವೆ ತೀವ್ರ ವಾಗ್ವಾದ ನಡೆದಿದೆ.
ಸಚಿವ ನಾರಾಯಣಗೌಡ ಜೊತೆ ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ತೀವ್ರ ವಾಗ್ವಾದ ನಡೆಸಿದ್ದು, ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದರು.
ವಿಧಾನಸೌಧದ ಮೊಗಸಾಲೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶಾಸಕರ ಕ್ಯಾಂಟೀನ್ನಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದೆ. ಕ್ಷೇತ್ರದ ಕೆಲಸ ಮಾಡದ ನೀನು ಎಂತಹ ಸಚಿವ ಎಂದು ಬೆಳ್ಳಿ ಪ್ರಕಾಶ್ ಏಕವಚನದಲ್ಲಿ ಕೂಗಾಡಿದ್ದಾರೆ. ಈ ವೇಳೆ ನೀನು ನನ್ನ ಕಚೇರಿಗೆ ಬಂದು ಮಾತನಾಡು ಎಂದ ತೋಟಗಾರಿಕೆ ಸಚಿವ ನಾರಾಯಣ ಗೌಡ ಹೇಳಿದ್ದಾರೆ.
ಈ ವೇಳೆ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತೆರಳಿದ್ದು, ಅಲ್ಲಿದ್ದ ಚೇರ್ಗಳನ್ನ ಎಳೆದಾಡಿ ಕೂಗಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ಶಾಸಕರಾದ ಸುನೀಲ್ ಕುಮಾರ್ ಮತ್ತು ಅನ್ನದಾನಿ ಜಗಳ ಬಿಡಿಸೋ ಪ್ರಯತ್ನ ಮಾಡಿದ್ದಾರೆ. ಆದರೆ ಸುಮ್ಮನಾಗದ ಇಬ್ಬರು ಮತ್ತೆ ಜಗಳ ಮುಂದುವರಿಸಿದ್ದಾರೆ.
ಇಬ್ಬರ ಕೂಗಾಟ ಕಂಡು ಒಂದು ಕ್ಷಣ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ. ಇವರಿಬ್ಬರ ಕೂಗಾಟ ನೋಡಿರುವ ಹಲವು ನಾಯಕರು ದಂಗಾಗಿದ್ದಾರೆ. ಗಲಾಟೆ ನಡೆದ ಸಂದರ್ಭದಲ್ಲಿ ಕ್ಯಾಂಟೀನ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಬಿಜೆಪಿಯ ಸುನೀಲ್ ಕುಮಾರ್, ಸಚಿವ ಕೆ.ಎಸ್ ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ, ಸೋಮಣ್ಣ ಇದ್ದರು. 3-4 ನಿಮಿಷದ ಗಲಾಟೆ ಬಳಿಕ ನಾಯಕರು ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ನಂತರ ಸದನಕ್ಕೆ ತೆರಳಿದ ಬೆಳ್ಳಿ ಪ್ರಕಾಶ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾರಾಯಣಗೌಡ ಸಹ ಕೆಲಕಾಲ ಕ್ಯಾಂಟೀನ್ನಲ್ಲಿ ಕುಳಿತು, ಆನಂತರ ಸದನಕ್ಕೆ ತೆರಳಿದ್ದಾರೆ.