ಆನೇಕಲ್: ಕೆಎಸ್ಆರ್ಟಿಸಿ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನೌಕರರಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಸಾಕಷ್ಟು ಕಾರ್ಪೊರೇಷನ್ ಸಂಸ್ಥೆಗಳಿವೆ. ಒಂದು ಸಂಸ್ಥೆಯವರನ್ನು ಸರ್ಕಾರಿ ನೌಕರರನ್ನಾಗಿ ಮಾಡಿದರೆ ಬೇರೆಯವರೂ ಕೇಳುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಗಡಿನಾಡ ಕನಕ ಜಯಂತಿ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. 'ಸಾರಿಗೆ ನೌಕರರ ಬೇಡಿಕೆಗಳಿಗೆ ಒಪ್ಪಿದರೆ, ಬಜೆಟ್ ಪೂರ್ಣ ಸರ್ಕಾರಿ ನೌಕರರಿಗೆ ನೀಡಬೇಕಾಗುತ್ತದೆ. ಗ್ರಾಮೀಣಾಭಿವೃದ್ಧಿ ಹಾಗೂ ರಸ್ತೆ ಚರಂಡಿಗೆ ಯಾವುದೇ ಹಣ ಉಳಿಯುವುದಿಲ್ಲ. ಬಜೆಟ್ನಲ್ಲಿ ಶೇ. 45 ರಷ್ಟು ಸರ್ಕಾರಿ ನೌಕರರಿಗೆ ಸಂಬಳ ಕೊಡುತ್ತಿದ್ದೇವೆ. ಕಾರ್ಪೊರೇಷನ್ ಸಂಸ್ಥೆ ಇವರನ್ನು ನೌಕರಿಗೆ ಪಡೆಯುವಾಗ ನೀವು ಸರ್ಕಾರಿ ನೌಕರರಲ್ಲ ಎಂದು ಮೊದಲೇ ಅಗ್ರಿಮೆಂಟ್ ಆಗಿರುತ್ತದೆ' ಎಂದರು.
ಓದಿ: ಸಾರಿಗೆ ಸಿಬ್ಬಂದಿಯೊಂದಿಗಿನ ಸಂಧಾನ ಸಭೆ ಸಫಲ: ನಾಳೆಯಿಂದಲೇ ಬಸ್ ಸಂಚಾರ ಆರಂಭ
ಸಂಬಳ ಹಾಗೂ ಪೆನ್ಷನ್ ಜಾಸ್ತಿ ಮಾಡಿ ಎಂದು ಕೇಳುವುದು ಸಮಂಜಸ. ಆದರೆ ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಕೇಳುವುದು ಸಮಂಜಸವಲ್ಲ. ಸರ್ಕಾರ ಚೆನ್ನಾಗಿ ನಡೆಯುತ್ತಿರುವುದರಿಂದ ಕೆಲವರ ಚಿತಾವಣೆಯಿಂದ ಹೀಗಾಗುತ್ತಿದೆ. ಇಡೀ ದೇಶ ಹಾಗೂ ರಾಜ್ಯ ಕೊರೊನಾ ಸಂಕಷ್ಟದಲ್ಲಿದೆ. ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅತಿ ಹೆಚ್ಚು ಹಣವನ್ನು ಇದಕ್ಕಾಗಿ ಖರ್ಚು ಮಾಡುತ್ತಿದೆ.
ಇವರಿಗೆ ಕುಮ್ಮಕ್ಕು ನೀಡುತ್ತಿರುವವರು ಯಾರು ಎಂದು ಸದ್ಯದಲ್ಲೇ ಗೊತ್ತಾಗುತ್ತದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರು ಬಸ್ ಪ್ರಾರಂಭ ಮಾಡಬೇಕು ಎಂದು ಸಚಿವರು ತಿಳಿಸಿದರು.