ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿಗಳು ಸಾವನ್ನಪ್ಪಿದ ಹಿನ್ನೆಲೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿರತೆ ಮತ್ತು ಜಿಂಕೆಗಳು ಸಾವನ್ನಪ್ಪಿವೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳಿಗೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಫೆಲೈನ್ ಎಂಬ ವೈರಸ್ ಸೋಂಕಿನಿಂದ ಚಿರತೆಗಳು ಸಾವನ್ನಪ್ಪಿವೆ. ಅಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ವ್ಯಾಕ್ಸಿನೇಷನ್ ಕೂಡ ನೀಡಿದ್ದಾರೆ ಎಂದು ಹೇಳಿದರು.
16 ಜಿಂಕೆಗಳು ಮತ್ತು 7 ಚಿರತೆ ಮರಿಗಳು ಸಾವನ್ನಪ್ಪಿವೆ. ಬ್ಯಾಕ್ಟೀರಿಯಾ ಸೋಂಕಿನಿಂದ ಜಿಂಕೆಗಳು ಸಾವನ್ನಪ್ಪಿವೆ. ಈ ಸಂಬಂಧ ಉನ್ನತ ಅಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು. ವರದಿ ಬಂದ ಕೂಡಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಉನ್ನತ ಅಧಿಕಾರಿಗಳೊಂದಿಗೆ ಸಚಿವರ ಸಭೆ : ರಾಜ್ಯದ ಯಾವುದೇ ಮೃಗಾಲಯಗಳಲ್ಲಿ ಬೆಕ್ಕಿನ ಜಾತಿಗೆ ಸೇರಿದ ವನ್ಯಮೃಗಗಳಿಗೆ ಸೋಂಕು ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಖಂಡ್ರೆ ಸೂಚನೆ ನೀಡಿದರು. ಬನ್ನೇರುಘಟ್ಟ ಉದ್ಯಾನವನದಲ್ಲಿ ಬೆಕ್ಕುಗಳಿಗೆ ತಗಲುವ ಮಾರಕ ಫೆಲಿನ್ ಪ್ಯಾನ್ಲೂಕೋಪೇನಿಯಾ (ಎಫ್.ಪಿ.ವಿ.) ವೈರಾಣು ಸೋಂಕಿನಿಂದ 7 ಚಿರತೆ ಮರಿಗಳು ಸಾವನ್ನಪ್ಪಿದ್ದವು. ಇದರ ಬೆನ್ನಲ್ಲೇ ಉದರ ಸಂಬಂಧಿ ಕಾಯಿಲೆ (ಹೆಮೊರೈಜಿಕ್ ಎಂಟ್ರೈಟಿಸ್ ಮತ್ತು ಎಂಡೋಕಾರ್ಡೈಟಿಸ್)ಯಿಂದ ಹಾಗೂ ಪರಸ್ಪರ ಸಂಘರ್ಷದಿಂದ ಒಂದು ವಾರದಲ್ಲೇ 16 ಜಿಂಕೆಗಳು ಸಾವನ್ನಪ್ಪಿದ್ದವು.
ಈ ಉದ್ಯಾನವನದಲ್ಲಿ ಚಿರತೆಗಳಿಗೆ ಸೋಂಕು ಬಂದಿರುವ ಹಿನ್ನೆಲೆಯಲ್ಲಿ ಇಲ್ಲಿನ ಯಾವುದೇ ಸಿಬ್ಬಂದಿ ರಾಜ್ಯದ ಬೇರೆ ಯಾವುದೇ ಮೃಗಾಲಯಕ್ಕೆ ಭೇಟಿ ನೀಡದಂತೆ ಆದೇಶಿಸಿದರು. ಮೈಸೂರಿನ ಜಗದ್ವಿಖ್ಯಾತ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಇತರ ಮೃಗಾಲಯಗಳಲ್ಲಿನ ಚಿರತೆ, ಸಿಂಹ, ಹುಲಿ, ಕಾಡು ಬೆಕ್ಕು ಇತ್ಯಾದಿಗಳಿಗೆ ಅಗತ್ಯವಿದ್ದರೆ ಲಸಿಕೆ ನೀಡುವಂತೆ ಸೂಚಿಸಿದರು.
ಜಿಂಕೆಗಳ ಸಾವಿನ ಕುರಿತು ಚರ್ಚೆ ನಡೆಸಿ, ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಿಂದ ಸಂರಕ್ಷಣೆ ಮಾಡಿ ತರಲಾದ ಜಿಂಕೆಗಳಿಗೆ ಉದರ ಸಂಬಂಧಿ ಕಾಯಿಲೆಗಳಿತ್ತು. ಹೀಗಾಗಿ ಅವುಗಳನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ಅವು ಪರಸ್ಪರ ಮತ್ತು ಸೋಂಕಿನಿಂದ ಮೃತಪಟ್ಟಿವೆ. ಮೃಗಾಲಯ ಅತ್ಯಂತ ಸುರಕ್ಷಿತ ಮತ್ತು ಸಂರಕ್ಷಿತ ತಾಣವಾಗಿದ್ದು, ಇಲ್ಲಿ ಇಷ್ಟು ಪ್ರಮಾಣದಲ್ಲಿ ವನ್ಯಮೃಗಗಳ ಸಾವು ನಿಜಕ್ಕೂ ಆಘಾತಕಾರಿ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ಕಾರ್ಯನಿರ್ವಾಹಕ ನಿರ್ದೇಶಕರಿಗೆ ತಿಳಿಸಿದರು.
ಅರಣ್ಯ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಸಮನ್ವಯದೊಂದಿಗೆ ಎಲ್ಲ ಪ್ರಾಣಿಗಳನ್ನು ಗಮನವಿಟ್ಟು ಪರೀಕ್ಷಿಸಿ ಅವುಗಳ ಆರೈಕೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಬೇಕು. ಯಾವುದೇ ವೈಮನಸ್ಯ ಮನಸ್ತಾಪದಿಂದ ಸಂಸ್ಥೆಗೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬಾರದಂತೆ ಮುಂಜಾಗ್ರತೆ ವಹಿಸಬೇಕು. ಯಾವುದೇ ವನ್ಯಮೃಗಗಳು ಹಠಾತ್ ಅಥವಾ ಅನುಮಾನಾಸ್ಪದ ಸಾವಿಗೀಡಾದರೆ ತಕ್ಷಣವೇ ಸರ್ಕಾರಕ್ಕೆ ಮತ್ತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಪಡೆಯ ಮುಖ್ಯಸ್ಥರಾದ ರಾಜೀವ್ ರಂಜನ್, ಪ್ರಧಾನ ಕಾರ್ಯದರ್ಶಿ (ಅರಣ್ಯ ವಿಭಾಗ) ಸಂಜಯ್ ಬಿಜ್ಜೂರ್, ವನ್ಯಜೀವಿ ಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಶ್ ಮಾಲ್ಕಡೆ, ಮತ್ತು ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ : ಒಂದೇ ವಾರದಲ್ಲಿ 13 ಜಿಂಕೆ ಸಾವು.. ಬನ್ನೇರುಘಟ್ಟ ಉದ್ಯಾನವನದಲ್ಲಿ ಮತ್ತೊಂದು ದುರಂತ..