ದೊಡ್ಡಬಳ್ಳಾಪುರ : ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ತಾಲೂಕಿನ ಉಪವಿಭಾಗಾಧಿಕಾರಿ ಕಚೇರಿ ಮುಂದೆ ವಲಸೆ ಕಾರ್ಮಿಕರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಜಮಾಯಿಸುತ್ತಿದ್ದಾರೆ.
ಜಿಲ್ಲಾಡಳಿತ ಕಳೆದೆರಡು ದಿನಗಳಿಂದ ವಲಸೆ ಕಾರ್ಮಿಕರ ನೋಂದಣಿ ಕಾರ್ಯವನ್ನು ಮಾಡುತ್ತಿದೆ. ವೈದ್ಯರ ತಂಡ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ನೋಂದಣಿ ಮಾಡುತ್ತಿದ್ದಾರೆ. ವಲಸೆ ಕಾರ್ಮಿಕರ ಸ್ವಂತ ಸ್ಥಳ, ಸ್ಥಳೀಯ ವಿಳಾಸ, ಉದ್ಯೋಗ, ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಪಡೆದು ಥರ್ಮಲ್ ಸ್ಕ್ರೀನಿಂಗ್ ಮಾಡಿ ನೋಂದಣಿ ಮಾಡಲಾಗುತ್ತಿದೆ.
ಈಗಾಗಲೇ 860 ಉತ್ತರಪ್ರದೇಶ ಹಾಗೂ ಬಿಹಾರದ ವಲಸೆ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪಟ್ಟಿಯನ್ನ ರಾಜ್ಯ ನೋಡಲ್ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಅಲ್ಲಿ ವಲಸೆ ಕಾರ್ಮಿಕರ ಪ್ರಯಾಣಕ್ಕೆ ರೈಲಿನ ವ್ಯವಸ್ಥೆ ಮಾಡಲಾಗುತ್ತಿದೆ, ಹಾಗೆಯೇ ರಾಜ್ಯದ ಹೊರಭಾಗದ ಜಿಲ್ಲೆಗಳ ಕಾರ್ಮಿಕರು ಸಹ ನೋಂದಣಿ ಮಾಡಿಸುತ್ತಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕೆಎಸ್ಆರ್ಟಿಸಿ ಬಸ್ ಗಳ ಮೂಲಕ ಪ್ರಯಾಣದ ವ್ಯವಸ್ಥೆಯನ್ನು ತಾಲೂಕು ಆಡಳಿತ ಮಾಡುತ್ತಿದೆ.