ದೊಡ್ಡಬಳ್ಳಾಪುರ: ಮೆಡಿಕಲ್ ಸ್ಟೋರ್ಗೆ ಬಾಗಿಲು ಹಾಕಿ ಮನೆಗೆ ಬರುತ್ತಿದ್ದ ಮಾಲೀಕನಿಗೆ ಡ್ರಾಪ್ ಕೇಳುವ ನೆಪದಲ್ಲಿ ಜೊತೆಯಲ್ಲೇ ಬಂದ ದುಷ್ಕರ್ಮಿಗಳು ನಿರ್ಜನ ಪ್ರದೇಶದಲ್ಲಿ ಲಾಂಗ್ನಿಂದ ಹಲ್ಲೆ ನಡೆಸಿದ್ದಾರೆ. ನಂತರ 26 ಗ್ರಾಂ ಚಿನ್ನದ ಸರ ಕಿತ್ಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ನಾಗೇನಹಳ್ಳಿ ಕ್ರಾಸ್ ಬಳಿ ನಿನ್ನೆ ರಾತ್ರಿ ಘಟನೆ ನಡೆದಿದೆ. ತೂಬಗೆರೆ ಗ್ರಾಮದಲ್ಲಿ ಸುಬ್ರಮಣ್ಯೇಶ್ವರ ಮೆಡಿಕಲ್ ಸ್ಟೋರ್ ಮಾಲೀಕ ವೆಂಕಟೇಶ್ ಬಾಬು ಹಲ್ಲೆಗೊಳಗಾದವರು ಎಂಬುದಾಗಿ ತಿಳಿದು ಬಂದಿದೆ. ನಿರ್ಜನ ಪ್ರದೇಶದಲ್ಲಿ ಲಾಂಗ್ನಿಂದ ಹಲ್ಲೆ ನಡೆಸಿದ ದರೋಡೆಕೋರರು 1.25 ಲಕ್ಷ ಮೌಲ್ಯದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ದೊಡ್ಡಬಳ್ಳಾಪುರ ನಗರದ ನಾರಾಯಣಪ್ಪ ಬಡಾವಣೆಯ ನಿವಾಸಿ ವೆಂಕಟೇಶ್ ಬಾಬು ತೂಬಗೆರೆಯಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಾರೆ. ಮೆಡಿಕಲ್ ಸ್ಟೋರ್ಗೆ ಬಾಗಿಲು ಹಾಕಿದ ನಂತರ ದೊಡ್ಡಬಳ್ಳಾಪುರಕ್ಕೆ ಬರೋದು ಅವರ ದಿನಚರಿಯಾಗಿತ್ತು. ನಿನ್ನೆ ರಾತ್ರಿ ಸಹ 8. 45ಕ್ಕೆ ಅಂಗಡಿ ಬಾಗಿಲು ಹಾಕಿಕೊಂಡು ಬೈಕ್ನಲ್ಲಿ ಮನೆಗೆ ಬರುತ್ತಿದ್ದರು. ಇದೇ ವೇಳೆ ಜಾಲಪ್ಪ ವೃದ್ಧಾಶ್ರಮದ ಬಳಿ ಅಪರಿಚಿತ ಯುವಕ ನಾಗೇನಹಳ್ಳಿ ಕ್ರಾಸ್ಗೆ ಡ್ರಾಪ್ ಕೇಳಿದ್ದಾನೆ. ಬೈಕ್ ಹತ್ತಿದ ಯುವಕ ತನ್ನ ಸಹಚರರಿಗೆ ಮೊಬೈಲ್ನಲ್ಲಿ ನಾಗೇನಹಳ್ಳಿ ಕಡೆ ಬರುತ್ತಿರುವ ಮಾಹಿತಿ ತಿಳಿಸಿದ್ದಾನೆ.
ವೆಂಕಟೇಶ್ ಬಾಬು ನಾಗೇನಹಳ್ಳಿ ಕ್ರಾಸಿನಲ್ಲಿ ಬೈಕ್ ನಿಲ್ಲಿಸುತ್ತಿದ್ದಂತೆ ಡ್ರಾಪ್ ಕೇಳಿದ ಯುವಕ ಬೈಕ್ ಬೀಳಿಸಿದ್ದಾರೆ. ಈ ಮೊದಲೇ ಅಲರ್ಟ್ ಆಗಿದ್ದ ದುಷ್ಕರ್ಮಿಗಳಿಬ್ಬರು ಬೈಕ್ನಲ್ಲಿ ಬಂದ ವೆಂಕಟೇಶ್ ಬಾಬು ಮೇಲೆ ಖಾರದ ಪುಡಿ ಎರಚಿದ್ದಾರೆ. ನಂತರ ಲಾಂಗ್ ನಿಂದ ಹಲ್ಲೆಗೆ ಮುಂದಾಗಿದ್ದಾರೆ. ದುಷ್ಕರ್ಮಿಗಳ ಕೈಯಿಂದ ಲಾಂಗ್ ಕಸಿದುಕೊಳ್ಳುವ ಯತ್ನದಲ್ಲಿ ವೆಂಕಟೇಶ್ ಬಾಬು ಕೈಗೆ ಗಾಯವಾಗಿದೆ.
ದುಷ್ಕರ್ಮಿಗಳು ಕೊರಳಲ್ಲಿದ್ದ 26 ಗ್ರಾಂ ತೂಕದ ಚಿನ್ನದ ಸರ ಹಾಗೂ ಬೈಕ್ ಕಸಿದು ಅಲ್ಲಿಂದ ಪರಾರಿಯಾಗಿದ್ದಾರೆ. ವೆಂಕಟೇಶಬಾಬು ಅವರು ಮತ್ತೊಂದು ಬೈಕ್ ಸವಾರರ ನೆರವಿನಿಂದ ಹಾಡೋನಹಳ್ಳಿಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂರು ದಿನಗಳ ಹಿಂದೆ ನಾಗೇನಹಳ್ಳಿ ಕ್ರಾಸ್ ಬಳಿಯೇ ವೆಂಕಟೇಶ್ ಬಾಬು ಅವರ ಬೈಕ್ ಅಡ್ಡಗಟ್ಟಲು ಯತ್ನಿಸಿದ್ದರು.
ಓದಿ: ಸ್ಕೂಬಾ ಡೈವಿಂಗ್‌ಗೆ 20 ಪ್ರವಾಸಿಗರ ಕರೆದೊಯ್ದ ದೋಣಿ ಮುಳುಗಡೆ: ಇಬ್ಬರ ಸಾವು, ನಾಲ್ವರ ಸ್ಥಿತಿ ಗಂಭೀರ