ಬೆಂಗಳೂರು: ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿ ಪಕ್ಷಿಗಳು ಹಾಗೂ ಮನುಷ್ಯನ ಜೀವನಕ್ಕೆ ಮಾರಕವಾದ ಪ್ಲಾಸ್ಟಿಕ್ ನಿಷೇಧ ಕಾಯ್ದೆ ಜಾರಿಗೊಳಿಸಿದ್ದು, ಈ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದಲ್ಲೂ ನಿಷೇಧಿಸಲು ಬೆಂಗಳೂರು ಹೊರವಲಯದ ಮಂಡೂರು ಗ್ರಾಮ ಪಂಚಾಯಿತಿ ಮುಂದಾಗಿದೆ.
ಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜ್ಯೋತಿಪುರ ಗ್ರಾಮದಲ್ಲಿ ನಡೆದ 2019-20ನೇ ಸಾಲಿನ ಗ್ರಾಮಸಭೆಯಲ್ಲಿ, ಮಂಡೂರು ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಪರಾಜು ಈ ನಿರ್ಣಯ ಮಂಡಿಸಿದ್ದು, ಇದನ್ನು ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಎರಡು ವಾರಗಳ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿ ಗ್ರಾಮಗಳ ನಿವಾಸಿಗಳು ಹಾಗೂ ಅಂಗಡಿಗಳ ಮಾಲೀಕರಿಗೆ ಈ ಬಗ್ಗೆ ಮಾಹಿತಿ ನೀಡಿಬೇಕು. ಪ್ಲಾಸ್ಟಿಕ್ ಬಳಸುವವರಿಗೆ ದಂಡ ವಿಧಿಸಿ, ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧವಾಗುವಂತೆ ಮಾಡಿಬೇಕು. ಇತರ ಪಂಚಾಯಿತಿಯವರು ಇದನ್ನು ಅನುಸರಿಸಲು ನಾವು ಮಾದರಿಯಾಗಬೇಕು ಎಂದು, ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮನವರಿಕೆ ಮಾಡಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಪ್ಲಾಸ್ಟಿಕ್ ನಿಷೇಧ ಜಾರಿಗೊಳಿಸಿದ್ದು, ಅದೇ ರೀತಿ ಪಂಚಾಯಿತಿ ವ್ಯಾಪ್ತಿಯಲ್ಲೂ ಪ್ಲಾಸ್ಟಿಕ್ ನಿಷೇಧ ಮಾಡಬೇಕೆಂಬ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಕೇಂದ್ರ ಕಚೇರಿಯಲ್ಲಿ ನಿರ್ಣಯಿಸಲಾಗಿದೆ. ಅದನ್ನು ಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದಲೇ ಪ್ರಾರಂಭಿಸಿ ಮಾದರಿ ಪಂಚಾಯಿತಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.